ಆಂಧ್ರಪ್ರದೇಶ: ಮದ್ಯ ಸಿಗದೆ ಸ್ಯಾನಿಟೈಸರ್ ಸೇವಿಸಿ 9 ಮಂದಿ ಸಾವು
ಅಮರಾವತಿ, ಜು.31: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡು ಎಂಬಲ್ಲಿ ಸ್ಯಾನಿಟೈಸರ್ ಸೇವಿಸಿ 9 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತಪಟ್ಟವರ ಪೈಕಿ ಕೆಲವರು ಭಿಕ್ಷುಕರು ಎಂದು ‘ಮುಂಬೈ ಮಿರರ್’ ಸುದ್ದಿ ತಾಣ ವರದಿ ಮಾಡಿದೆ.
ಕಳೆದ 10 ದಿನಗಳಲ್ಲಿ ಸುಮಾರು 20 ಮಂದಿ ಸ್ಯಾನಿಟೈಸರ್ ಸೇವಿಸಿದ್ದಾರೆ. ಬುಧವಾರ ಮೊದಲ ಸಾವಿನ ವರದಿಯಾಗಿತ್ತು. ಗುರುವಾರ ಮತ್ತೆ ಮೂರು ಮಂದಿ ಮೃತಪಟ್ಟಿದ್ದಾರೆ. ಮೃತರು 25ರಿಂದ 65 ವರ್ಷ ವಯಸ್ಸಿನವರು ಎನ್ನಲಾಗಿದೆ.
ಮದ್ಯ ಸಿಗದೇ ಜನರು ಸ್ಯಾನಿಟೈಸರ್ ಕುಡಿದಿದ್ದಾರೆ ಎಂದು ಕೆಲವು ಸುದ್ದಿವಾಹಿನಿಗಳು ವರದಿ ಮಾಡಿವೆ. ಸ್ಥಳೀಯ ಅಂಗಡಿಗಳಿಂದ ಸ್ಯಾನಿಟೈಸರ್ ಪಡೆಯಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಕೌಶಲ್ ಹೇಳಿದ್ದಾರೆ.
ಸ್ಯಾನಿಟೈಸರ್‌ಗಳನ್ನು ಹಾಗೆಯೇ ಸೇವಿಸಲಾಗಿದೆಯೇ ಅಥವಾ ಬೇರೆ ಯಾವುದಾದರೂ ದ್ರವದ ಜೊತೆಗೆ ಬೆರೆಸಿ ಸೇವಿಸಲಾಗಿದೆಯೇ ಎಂಬ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.