ಕೋವಿಡ್ ಸಮಸ್ಯೆಯ ನಡುವೆ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಸುವುದಕ್ಕೆ ರಾಜ್ ಠಾಕ್ರೆ ವಿರೋಧ

Update: 2020-07-31 10:34 GMT

 ಮುಂಬೈ, ಜು.31 : ದೇಶ ಕೋವಿಡ್-19 ಸಮಸ್ಯೆಯಿಂದ ತತ್ತರಿಸುತ್ತಿರುವಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ಸಮಾರಂಭವನ್ನು  ಆಯೋಜಿಸುವುದು ಬೇಡವಾಗಿತ್ತು  ಹಾಗೂ ಪರಿಸ್ಥಿತಿ ಸಹಜತೆಗೆ ಮರಳಿದ ನಂತರ ಭೂಮಿ ಪೂಜೆ ನೆರವೇರಿಸಬಹುದಾಗಿತ್ತು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಇ-ಭೂಮಿ ಪೂಜೆ ನಡೆಸಬೇಕೆಂಬ ಮುಖ್ಯಮಂತ್ರಿ ಹಾಗೂ ತಮ್ಮ ಸೋದರ ಉದ್ಧವ್ ಠಾಕ್ರೆ ನೀಡಿರುವ ಸಲಹೆಯನ್ನೂ ಅವರು ತಿರಸ್ಕರಿಸಿದ್ದಾರಲ್ಲದೆ ಭೂಮಿ ಪೂಜೆಯಂತಹ ಸಮಾರಂಭವನ್ನು ಅತ್ಯಂತ ಶ್ರದ್ಧೆಯಿಂದ ನೆರವೇರಿಸಬೇಕಿದೆ ಎಂದಿದ್ದಾರೆ.
"ಜನರಿಗೆ ಕೋವಿಡ್ ಬಗ್ಗೆಯೇ ಚಿಂತೆಯಿರುವ ಈ ಸಮಯದಲ್ಲಿ ಭೂಮಿ ಪೂಜೆ ಬೇಡವಾಗಿತ್ತು. ಎರಡು ತಿಂಗಳ ನಂತರ ಪರಿಸ್ಥಿತಿ ಸಹಜತೆಗೆ ಮರಳಿದ ನಂತರ ಆಯೋಜಿಸಬಹುದಾಗಿತ್ತು. ಆಗ ಜನರೂ ಸಮಾರಂಭದಿಂದ ಸಂತೋಷ ಪಡುತ್ತಿದ್ದರು'' ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸರಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸಿದ ಕುರಿತೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು ಸೋಂಕಿನ ಬಗ್ಗೆ ಜನರಲ್ಲಿರುವ ಭಯವನ್ನು ದೂರಗೊಳಿಸಬೇಕಿದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಉದ್ಯೋಗ ನಷ್ಟದ ಕುರಿತು ಕಳವಳ ವ್ಯಕ್ತಪಡಿಸಿದ ರಾಜ್ ಠಾಕ್ರೆ  "ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಮತ್ತೆ  ಪುಟಿದೇಳುವ ಅಗತ್ಯವಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News