ಬಲಪಂಥೀಯ ಟ್ರೋಲ್ ಗಳಿಂದ ಅಪಪ್ರಚಾರ ಅಭಿಯಾನ : ನ್ಯೂಸ್ 18 ಗೆ ಖ್ಯಾತ ಪತ್ರಕರ್ತ ಗುಣಶೇಖರನ್ ರಾಜೀನಾಮೆ

Update: 2020-07-31 13:23 GMT

ಚೆನ್ನೈ ,ಜು. 31 : ತಮಿಳಿನ ಹಿರಿಯ ಪತ್ರಕರ್ತ ಎಂ ಗುಣಶೇಖರನ್ ಅವರು ಮುಖೇಶ್ ಅಂಬಾನಿ ಒಡೆತನದ ನ್ಯೂಸ್ 18 ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಗುಣಶೇಖರನ್ ಅವರು ಡಿಎಂಕೆ ಪರ ವಕಾಲತ್ತು ವಹಿಸುತ್ತಿದ್ದಾರೆ ಹಾಗು ಅವರ ನೇತೃತ್ವದಲ್ಲಿ ಚಾನಲ್  ಹಿಂದೂ ವಿರೋಧಿಯಾಗಿದೆ ಎಂದು  ಬಲಪಂಥೀಯ ಯೂಟೂಬರ್ ಮರಿದಾಸ್ ಮಾಡಿದ ಸತತ ಆರೋಪ ಹಾಗು ಅದರ ಬೆನ್ನಿಗೆ ನಡೆದ ಆನ್ ಲೈನ್ ಅಪಪ್ರಚಾರ ಅಭಿಯಾನದ ಬಳಿಕ  ಗುಣಶೇಖರನ್ ಅವರಿಂದ  ಸಂಪಾದಕೀಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹಿಂಪಡೆಯಲಾಗಿತ್ತು. ಇದೀಗ ಗುಣಶೇಖರನ್ ಅವರು ಚಾನಲ್ ಗೆ ರಾಜೀನಾಮೆ ನೀಡಿದ್ದಾರೆ.

ತಮಿಳು ಹಾಗು ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ತಮ್ಮ ರಾಜಕೀಯ ವಿಶ್ಲೇಷಣೆಗಳಿಗಾಗಿ ಭಾರೀ ಹೆಸರು ಮಾಡಿರುವ ಗುಣಶೇಖರನ್ ಅವರು ಪ್ರತಿಷ್ಠಿತ ರಾಮನಾಥ್ ಗೋಯಂಕಾ ಪ್ರಶಸ್ತಿ ಪಡೆದ ಪ್ರಪ್ರಥಮ ತಮಿಳು ಟಿವಿ ಪತ್ರಕರ್ತ. " ತನ್ನ ನೇತೃತ್ವದಲ್ಲಿ ನ್ಯೂಸ್ 18 ಯಾವುದೇ ಒಂದು ಪಕ್ಷದ ಪರ ಕೆಲಸ ಮಾಡಿಲ್ಲ , ಇದು ನಮ್ಮ ವೀಕ್ಷಕರು ಹಾಗು ಎಲ್ಲ ಪಕ್ಷದ ನಾಯಕರಿಗೆ ಗೊತ್ತಿದೆ" ಎಂದು ಗುಣಶೇಖರನ್ ತನ್ನ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ನ್ಯೂಸ್ 18 ಇನ್ನೊಬ್ಬ ಹಿರಿಯ ಪತ್ರಕರ್ತ ಹಸೀಫ್ ಮೊಹಮ್ಮದ್ ಅವರಿಂದ ಇದೇ ವಿವಾದದ ಹಿನ್ನೆಲೆಯಲ್ಲಿ  ಈಗಾಗಲೇ ರಾಜೀನಾಮೆ ಪಡೆದಿದೆ. 

" ನನ್ನ ಹಾಗು ನ್ಯೂಸ್ 18 ಸಂಬಂಧ ಕೇವಲ ಉದ್ಯೋಗಿ ಹಾಗು ಸಂಸ್ಥೆಯದ್ದಲ್ಲ. ನನಗೆ ಸಂಸ್ಥೆಯ ಜೊತೆ ಭಾವನಾತ್ಮಕ ಬಂಧವಿತ್ತು. ಯಾವುದೇ ಸುದ್ದಿ ಸಂಸ್ಥೆಗೆ ಜನರ ವಿಶ್ವಾಸ ಗಳಿಸುವುದು ಸುಲಭವಲ್ಲ. ಆದರೆ ನಮ್ಮ ಕಠಿಣ ಪರಿಶ್ರಮ, ನಿಷ್ಠೆ ಹಾಗು ಜನರ ಧ್ವನಿಯಾಗಿ ಕೆಲಸ ಮಾಡಿದ್ದರಿಂದ ಜನರೇ ನಮ್ಮನ್ನು ಗೆಲ್ಲಿಸಿದರು. ಈ ಹಾದಿಯಲ್ಲಿ ಎಲ್ಲ ಆಶಂಕೆ, ಸವಾಲುಗಳನ್ನು ಮೆಟ್ಟಿ ನಿಂತು ನಾವು ಈ ಹಂತಕ್ಕೆ ತಲುಪಿದ್ದೆವು " ಎಂದು ಗುಣಶೇಖರನ್ ಸ್ಮರಿಸಿದ್ದಾರೆ.

ಜುಲೈ ಯಲ್ಲಿ ನ್ಯೂಸ್ 18 ಆಡಳಿತ ವರ್ಗಕ್ಕೆ ಬರೆದ ಪತ್ರದಲ್ಲಿ ಆ ಸಂಸ್ಥೆಯ ಗುಣಶೇಖರನ್ ಸಹಿತ ಕೆಲವು ಪತ್ರಕರ್ತರು ಹಾಗು ಸಂಪಾದಕರು ಡಿಎಂಕೆಯ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲಿಗರಾಗಿದ್ದಾರೆ ಎಂದು ಮರಿದಾಸ್ ದೂರಿದ್ದರು. ನ್ಯೂಸ್ 18 ಇವರಿಂದಾಗಿ ಹಿಂದೂ ವಿರೋಧಿಯಾಗಿದೆ ಎಂದೂ ಅವರು ಆರೋಪಿಸಿದ್ದರು. ತನ್ನ ಪತ್ರಕ್ಕೆ ಚಾನಲ್ ನಿಂದ ಪ್ರತಿಕ್ರಿಯೆ ಬಂದಿದೆ ಎಂದು ಒಂದು ಪತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಅದು ನಕಲಿ ಎಂದು ನ್ಯೂಸ್ 18 ಮರಿದಾಸ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಆದರೆ ಪೊಲೀಸರು ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೈಕೋರ್ಟ್ ಚಾನಲ್ ವಿರುದ್ಧ ಹಾಕಿರುವ ಎಲ್ಲ ವಿಡಿಯೋಗಳನ್ನು ತೆಗೆದು ಹಾಕುವಂತೆ ಮರಿದಾಸ್ ಗೆ ಹೇಳಿತು. ಮರಿದಾಸ್ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ತೀರಾ ಉತ್ಪ್ರೇಕ್ಷಿತ  ವಿಡಿಯೋಗಳನ್ನು ಪ್ರಸಾರ ಮಾಡುವವರೆಂದು ಕುಖ್ಯಾತರಾಗಿದ್ದಾರೆ.

ಕೋರ್ಟ್ ಈ ಆದೇಶ ನೀಡಿದ ಎರಡು ದಿನಗಳ ಬಳಿಕ ಗುಣಶೇಖರನ್ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News