ಕೊರೋನದಿಂದಾಗಿ 34ನೇ ಪ್ರಯತ್ನದಲ್ಲಿ 10ನೇ ತರಗತಿ ಪಾಸಾದ ನೂರುದ್ದೀನ್

Update: 2020-07-31 16:05 GMT

 ಹೈದರಾಬಾದ್, ಜು.31: ಹೈದರಾಬಾದ್ ನಿವಾಸಿ ಮುಹಮ್ಮದ್ ನೂರುದ್ದೀನ್ ತನ್ನ 51ನೇ ವಯಸ್ಸಿನಲ್ಲಿ 34ನೇ ಪ್ರಯತ್ನದಲ್ಲಿ ಎಸ್‌ಎಸ್‌ಸಿ ಅಥವಾ 10ನೇ ತರಗತಿಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಪಾಸಾಗಲು ಸತತ ಯತ್ನ ನಡೆಸಿದ್ದ ನೂರುದ್ದೀನ್ ತನ್ನ ಯಶಸ್ಸಿನ ಶ್ರೇಯಸ್ಸನ್ನು ಕೋವಿಡ್-19ಗೆ ಸಲ್ಲಿಸಿದ್ದಾರೆ. ತೆಲಂಗಾಣ ಪರೀಕ್ಷಾ ಮಂಡಳಿ ಈ ಬಾರಿ ಕೊರೋನದಿಂದಾಗಿ ಎಸ್‌ಎಸ್‌ಸಿ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಿತ್ತು.

ನೂರುದ್ದೀನ್ 1987ರಲ್ಲಿ ಮೊದಲ ಬಾರಿ ಎಸ್‌ಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ ಅವರು ಇಂಗ್ಲೀಷ್ ಪತ್ರಿಕೆಯಲ್ಲಿ ಪಾಸಾಗಲು ವಿಫಲರಾಗಿದ್ದರು.

  "ನನಗೆ ಇಂಗ್ಲೀಷ್ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಕುಟುಂಬದಲ್ಲಿನ ಪರಿಸ್ಥಿತಿ ಟ್ಯೂಶನ್‌ಗೆ ತೆರಳಲು ಅವಕಾಶ ನೀಡಲಿಲ್ಲ.ನನ್ನ ಕುಟುಂಬದ ನೆರವು ಪಡೆದರೂ ನನಗೆ ಇಂಗ್ಲೀಷ್‌ನಲ್ಲಿ ಪಾಸ್ ಮಾರ್ಕ್ ಸಿಗಲಿಲ್ಲ. ಪ್ರತಿ ಬಾರಿಯೂ 30ಕ್ಕಿಂತ ಕಡಿಮೆ ಅಂಕ ಬರುತ್ತಿತ್ತು’’ ಎಂದು ನೂರುದ್ದೀನ್ ಹೇಳಿದ್ದಾರೆ.

ನೂರುದ್ದೀನ್ 1990ರಿಂದ ಮುಶೀರಾಬಾದ್‌ನಲ್ಲಿರುವ ಅಂಜುಮಾನ್ ಬಾಲಕರ ಹೈಸ್ಕೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಎಸ್‌ಎಸ್‌ಸಿ ಪಾಸಾಗಿರುವ ಅವರು ಸರಕಾರದ ಇಲಾಖೆಯಲ್ಲಿ ಡಿ ದರ್ಜೆಯ ಹುದ್ದೆ ಗಿಟ್ಟಿಸಿಕೊಳ್ಳುವ ಆಕಾಂಕ್ಷೆಯಲ್ಲಿದ್ದಾರೆ. ವಯಸ್ಸು ಹಾಗೂ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ವಿದ್ಯಾಭಾಸ ಮುಂದುವರಿಸದಿರಲು ಅವರು ನಿರ್ಧರಿಸಿದ್ದಾರೆ. ಇವರು 2015ರಿಂದ ತಮ್ಮ ಪರಿಸರದಲ್ಲಿ ಎರಡು ಮದ್ರಸ ಶಾಲೆಗಳನ್ನು ನಡೆಸುತ್ತಿದ್ದಾರೆ. ನೂರುದ್ದೀನ್ ಎಸ್‌ಎಸ್‌ಸಿ ಪಾಸಾಗಿರುವುದು ಅವರ 90ರ ವಯಸ್ಸಿನ ತಂದೆಗೆ ತುಂಬಾ ಖುಷಿ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News