6,000 ವಲಸಿಗ ಕಾರ್ಮಿಕರನ್ನು ಜೀತಮುಕ್ತಗೊಳಿಸಿದ ಆದಿವಾಸಿ ಬಾಲಕಿಯ ಅಸಾಮಾನ್ಯ ಸಾಧನೆ

Update: 2020-07-31 18:40 GMT

ಭುಬನೇಶ್ವರ, ಜುಲೈ.31: ತಮಿಳುನಾಡಿನ ಇಟ್ಟಿಗೆ ತಯಾರಿಕ ಘಟಕಗಳಲ್ಲಿ ಕೊರೋನ ಸಂದರ್ಭದಲ್ಲಿ ಜೀತಕ್ಕೆ ಸಿಲುಕಿದ್ದ 6,000 ವಲಸಿಗ ಕಾರ್ಮಿಕರನ್ನು ರಕ್ಷಿಸಿದ ಒಡಿಶ್ಶಾದ ಆದಿವಾಸಿ ಬಾಲಕಿಯೊಬ್ಬಳ ಅಸಾಮಾನ್ಯ ಸಾಹಸವನ್ನು ರಾಷ್ಟ್ರೀಯ ಮಹಿಳಾ ಆಯೋಗ ಪ್ರಶಂಸಿಸಿದೆ.

ವಿಶ್ವ ಮನುಷ್ಯರ ಅಕ್ರಮ ಸಾಗಾಟ ವಿರೋಧಿ ದಿನದಂದು ಈ ಸಾಹಸಿ ಬಾಲಕಿ ಮಾನ್ಸೀ ಬರಿಹ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಸರಣಿ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದೆ.

ಮಾನ್ಸೀ,ಆಕೆಯ ತಂದೆ ಹಾಗೂ ಆಕೆಯ ಕಿರಿಯ ಸಹೋದರಿ ತಮಿಳುನಾಡಿನ ಪುದುಕುಪ್ಪಂ ಎಂಬಲ್ಲಿರುವ ಜಿಡಿಎಂ ಇಟ್ಟಿಗೆ ತಯಾರಿಕ ಘಟಕದಲ್ಲಿ ಕೆಲಸ ಮಾಡಲು ತಲಾ 28,000 ರೂಪಾಯಿ ಪಡೆದಿದ್ದರು. ತಮ್ಮ ದಿವಂಗತ ತಾಯಿಯ ವೈದ್ಯಕೀಯ ಚಿಕಿತ್ಸೆಗಾಗಿಯೇ ಈ ಹಣವನ್ನು ಅವರು ಮುಂಗಡವಾಗಿ ಪಡೆದಿದ್ದರು. ಪಡೆದ ಹಣಕ್ಕಾಗಿ ದುಡಿಯಲು ಈ ಮೂವರು ಒಡಿಶಾದಿಂದ ತಮಿಳುನಾಡಿಗೆ ವಲಸೆ ಹೋಗಿದ್ದರು.

ದೇಶಾದ್ಯಂತ ಲಾಕ್ ಡೌನ್ ಘೋಷಿಸಿದಾಗ ಈ ಮೂವರು ಆಗಲೇ ವಾರಕ್ಕೆ ಕೇವಲ 250 ರೂಪಾಯಿ ಊಟದ ಭತ್ತೆ ಪಡೆದು ಹಲವಾರು ತಿಂಗಳು ಕೆಲಸ ಮಾಡಿ ಮುಗಿದಿತ್ತು. ಕೊರೋನ ತಗಲುವ ಭಯದಿಂದ ನಮ್ಮನ್ನು ಒಡಿಶಾಕ್ಕೆ ವಾಪಾಸು ಹೋಗಲು ಎಂದು ತಂದೆ, ಮಕ್ಕಳು ಹಾಗೂ ಇತರ ಕಾರ್ಮಿಕರು ಇಟ್ಟಿಗೆ ತಯಾರಿಕ ಘಟಕದ ಮಾಲಕನಲ್ಲಿ ಕೇಳಿಕೊಂಡಾಗ ಅವರು ಅದಕ್ಕೆ ಅವಕಾಶ ನೀಡಲಿಲ್ಲ. ಉಳಿದ ಎಲ್ಲಾ ಕೆಲಸವನ್ನು ಒಂದು ವಾರದೊಳಗೆ ಮಾಡಿ ಮುಗಿಸಿದರೆ ತಮ್ಮನ್ನು ವಾಪಾಸು ಹೋಗಲು ಬಿಡಬೇಕು ಎಂದು ಈ ಕಾರ್ಮಿಕರು ಮಾಲಕನ ಜೊತೆ ಒಪ್ಪಂದ ಮಾಡಿಕೊಂಡರು. ಅದರಂತೆ ಒಂದೇ ವಾರದೊಳಗೆ ಬಾಕಿ ಕೆಲಸವನ್ನು ಅತ್ಯಂತ ವೇಗವಾಗಿ ಮಾಡಿಮುಗಿಸಿದರು.

ಆದರೆ ಕೆಲಸ ಮುಗಿದ ಕೂಡಲೆ ಒಪ್ಪಂದದಿಂದ ಹಿಂದೆ ಸರಿದ ಮಾಲಕರು ಕಾರ್ಮಿಕರನ್ನು ವಾಪಾಸು ಹೋಗಲು ಬಿಡಲಿಲ್ಲ. ಮೇ.2ನೇ ವಾರದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಘಟಕದಿಂದ ತೆರಳಲು ಪ್ರಯತ್ನಿಸಿದಾಗ ಮಾಲಕ ಹಾಗೂ ಆತನ ಜನರು ಕಾರ್ಮಿಕರ ಮೇಲೆ ಮಹಿಳೆಯರು ಮಕ್ಕಳು ಎಂದೂ ನೋಡದೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಮಾನ್ಸೀ ಪ್ರಕಾರ ಈ ಹಲ್ಲೆ ಎಷ್ಟು ಗಂಭೀರವಾಗಿತ್ತೆಂದರೆ ಕೆಲವರ ಬೆನ್ನು ಮೂಲೆ ಮುರಿದಿದೆ. ಕೆಲವರಿಗೆ ತಲೆಗೆ ಗಾಯವಾಗಿದೆ. ಆದರೆ ಈ ಗಂಭೀರವಾಗಿ ಗಾಯಗೊಂಡವರಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿಲ್ಲ.

ಈ ಕಾರ್ಮಿಕರ ಮೇಲೆ ಈ ಹಠಾತ್ ದಾಳಿ ನಡೆದಾಗ ಮಾನ್ಸೀ ಬರಿಹ ಎದೆಗುಂದದೆ ದಿಟ್ಟತನದಿಂದ ಈ ದಾಳಿಯನ್ನು ಆಡಿಯೋ, ವೀಡಿಯೋ ಹಾಗೂ ಫೋಟೊಗಳನ್ನು ತೆಗೆದು ತನ್ನ ಬಳಿಯಿದ್ದ ವಾಟ್ಸ್ಯಾಪ್ ನಂಬರ್ ಗಳಿಗೆ ರವಾನಿಸಿ ಸಹಾಯ ಕೋರಿದ್ದಾಳೆ. ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಸ್ವಯಂ ಸೇವಾ ಸಂಘಟನೆಗಳು ಈ ಬಗ್ಗೆ ತಿರುವಳೂರ್ ಜಿಲ್ಲಾಡಳಿತದ ಗಮನ ಸೆಳೆದರು. ಕೂಡಲೇ ಕಾರ್ಯ ಪ್ರವೃತ್ತರಾದ ಜಿಲ್ಲಾಡಳಿತ ಇಟ್ಟಿಗೆ ಘಟಕದ ವಿರುದ್ಧ ದಾಳಿ ಮಾಡಿ ಮಾಲಕನ ಸಹಚರರನ್ನು ಬಂಧಿಸಿದೆ, ಮಾಲಕ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ

ತಮಿಳುನಾಡು ಸರಕಾರ 150 ಬಸ್ ಗಳಲ್ಲಿ ಬರೀಹ ಕೆಲಸ ಮಾಡುತ್ತಿದ್ದ ಘಟದಕ 250 ಕಾರ್ಮಿಕರ ಸಹಿತ 6750 ಕಾರ್ಮಿಕರನ್ನು ರೈಲ್ವೇ ನಿಲ್ದಾಣಗಳಿಗೆ ತಲುಪಿಸಿ ಅವರರ ತಾಯಿನಾಡಿಗೆ ಮರಳಲು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News