ಒಂದೇ ದಿನ 57 ಸಾವಿರ ಕೊರೋನ ಪ್ರಕರಣ

Update: 2020-08-01 03:43 GMT

ಹೊಸದಿಲ್ಲಿ, ಆ.1: ದೇಶದಲ್ಲಿ ಶುಕ್ರವಾರ ಒಂದೇ ದಿನ ದಾಖಲೆ ಪ್ರಮಾಣದ ಅಂದರೆ 57 ಸಾವಿರ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಜುಲೈ ತಿಂಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 11.1 ಲಕ್ಷ ದಾಟಿದ್ದು, ಮಾರಕ ಸೋಂಕಿಗೆ ಜುಲೈನಲ್ಲಿ 19,122 ಮಂದಿ ಬಲಿಯಾಗಿದ್ದಾರೆ.

ಜುಲೈನಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಜೂನ್‌ಗಿಂತ 2.8 ಪಟ್ಟು ಅಧಿಕ. ಜೂನ್‌ನಲ್ಲಿ ಸುಮಾರು 4 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಅಂತೆಯೇ ಜೂನ್‌ನಲ್ಲಿ ಸೋಂಕಿನಿಂದ ಒಟ್ಟು 11,988 ಮಂದಿ ಮೃತಪಟ್ಟಿದ್ದರೆ ಜುಲೈನಲ್ಲಿ 1.6 ಪಟ್ಟು ಅಧಿಕ ಮಂದಿ ಮೃತಪಟ್ಟಿದ್ದಾರೆ. ಜುಲೈ ತಿಂಗಳ ಉತ್ತರಾರ್ಧದಲ್ಲಿ 7.3 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ತಿಂಗಳ ಪೂರ್ವಾರ್ಧದಲ್ಲಿ ದಾಖಲಾದ ಪ್ರಕರಣಗಳ ಎರಡು ಪಟ್ಟು. ಜುಲೈ ಉತ್ತರಾರ್ಧದಲ್ಲಿ 11,600 ಮಂದಿ ಮೃತಪಟ್ಟಿದ್ದು, ಇದು ಒಟ್ಟು ಸಾವಿನ ಸಂಖ್ಯೆಯ ಶೇಕಡ 60ರಷ್ಟಾಗಿದೆ.

ಶುಕ್ರವಾರ ಒಟ್ಟು 57,151 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 11,94,918ಕ್ಕೇರಿದೆ. ಸತತ ನಾಲ್ಕನೇ ದಿನ ದೇಶದಲ್ಲಿ 50 ಸಾವಿರಕ್ಕೂ ಅಧೀಕ ಪ್ರಕರಣ ದಾಖಲಾಗಿದ್ದು, ಸಾವಿನ ಸಂಖ್ಯೆ (766) ಕೂಡಾ ಸತತ ನಾಲ್ಕನೇ ದಿನ 750ಕ್ಕಿಂತ ಅಧಿಕ ಇದೆ.

ಆಂಧ್ರ ಪ್ರದೇಶದಲ್ಲಿ ಗರಿಷ್ಠ (10,376) ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ (10,320) ಎರಡನೇ ಸ್ಥಾನದಲ್ಲಿದೆ. ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಆಂಧ್ರದ ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರಕ್ಕಿಂತ ಅಧಿಕವಾಗಿದೆ. ಆಂಧ್ರದ ಒಟ್ಟು ಪ್ರಕರಣಗಳ ಸಂಖ್ಯೆ 1.4 ಲಕ್ಷ ದಾಟಿದ್ದು, ಗರಿಷ್ಠ ಪ್ರಕರಣಗಳ ಸಂಖ್ಯೆಯಲ್ಲಿ ದಿಲ್ಲಿಯನ್ನು ಮೀರಿಸಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 4.2 ಲಕ್ಷ ಹಾಗೂ ತಮಿಳುನಾಡಿನಲ್ಲಿ 2.5 ಲಕ್ಷ ಪ್ರಕರಣಗಳು ದಾಖಲಾಗಿವೆ.

ಉಳಿದಂತೆ ಉತ್ತರಪ್ರದೇಶ (4,453), ಬಿಹಾರ (2,986), ಬಂಗಾಳ (2,496), ಅಸ್ಸಾಂ (2,112), ತೆಲಂಗಾಣ (1,986), ಕೇರಳ (1310) ಮತ್ತು ಪಂಜಾಬ್ (655) ಕೂಡಾ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News