ಅಯೋಧ್ಯೆ: ಮತ್ತೆ ವಿವಾದ ಕೆದಕಿದ ಕಲ್ಯಾಣ್‌ ಸಿಂಗ್

Update: 2020-08-01 04:36 GMT

ಲಕ್ನೋ, ಆ.1: ಕರ ಸೇವಕರು ಬಾಬರಿ ಮಸೀದಿ ಕೆಡವಿದ್ದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವಾಯಿತು ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂದರ್ಭದಲ್ಲಿ 1992ರ ಡಿಸೆಂಬರ್ 6ರಂದು ಕರಸೇವಕರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಲಿಖಿತ ಅನುಮತಿ ನೀಡದ ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.

ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಸ್ಥಳದಲ್ಲಿ ಕರಸೇವಕರು ಪ್ರತಿಭಟನೆಗಾಗಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಮಸೀದಿ ಕೆಡವಲಾಗಿತ್ತು. ಬಳಿಕ ಕಲ್ಯಾಣ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್ ದಶಕಗಳಷ್ಟು ಹಳೆಯ ಪ್ರಕರಣವನ್ನು ಇತ್ಯರ್ಥಪಡಿಸಿ, ಈ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿತ್ತು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ನಾನು ಸತ್ತು ಮತ್ತೆ ಇದೇ ದೇಗುಲ ನಗರಿಯಲ್ಲಿ ಹುಟ್ಟಲು ಬಯಸುತ್ತೇನೆ ಎಂದು 88 ವರ್ಷ ವಯಸ್ಸಿನ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ಪ್ರವಾಸೋದ್ಯಮಕ್ಕೆ ಪೂರಕವಾಗುತ್ತದೆ ಹಾಗೂ ಅಯೋಧ್ಯೆಯ ಸಮಗ್ರ ಅಭಿವೃದ್ಧಿಗೆ ಅವಕಾಶವಾಗುತ್ತದೆ ಎಂದು ರಾಜಸ್ಥಾನದ ರಾಜ್ಯಪಾಲರೂ ಆಗಿದ್ದ ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News