ಚೀನೀ ಭಾಷೆಯ ಉಲ್ಲೇಖವಿಲ್ಲದ ಹೊಸ ಶಿಕ್ಷಣ ನೀತಿ ಪ್ರಕಟ

Update: 2020-08-01 13:59 GMT

ಹೊಸದಿಲ್ಲಿ, ಆ.1: ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ವಿದೇಶಿ ಭಾಷೆಯ ಪಟ್ಟಿಯಲ್ಲಿ ಚೀನೀ ಭಾಷೆಯನ್ನು ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ.

ಈ ವರ್ಷದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ರಮೇಶ್ ಪೋಖ್ರಿಯಾಲ್ ಬಿಡುಗಡೆಗೊಳಿಸಿದ್ದು, ವಿದೇಶಿ ಭಾಷೆಗಳ ಉದಾಹರಣೆಯ ಪಟ್ಟಿಯಲ್ಲಿ ಕೊರಿಯನ್, ರಶ್ಯನ್, ಪೋರ್ಚುಗೀಸ್ ಮತ್ತು ಥಾಯ್ ಭಾಷೆಯನ್ನು ಹೆಸರಿಸಲಾಗಿದೆ. ವಿದೇಶಿ ಭಾಷೆಗಳ ಉದಾಹರಣೆ ಪಟ್ಟಿಯಿಂದ ಮಾತ್ರ ಚೀನೀ ಭಾಷೆಯನ್ನು ಹೊರಗಿಡಲಾಗಿದೆಯೇ ಅಥವಾ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಆಯ್ಕೆಯಿಂದಲೇ ಚೀನೀ ಭಾಷೆಯನ್ನು ಕೈಬಿಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕಳೆದ ವರ್ಷ ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ , ಆಸಕ್ತ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಿರುವ ವಿದೇಶೀ ಭಾಷೆಗಳ ಪಟ್ಟಿಯಲ್ಲಿ ಫ್ರೆಂಚ್, ಜರ್ಮನ್, ಸ್ಪಾನಿಷ್, ಜಪಾನೀ ಭಾಷೆಯ ಜೊತೆಗೆ ಚೀನಾದ ಭಾಷೆಯನ್ನೂ ಸೇರಿಸಲಾಗಿತ್ತು. ಪ್ರಸಕ್ತ ಭಾರತ-ಚೀನಾ ಮಧ್ಯೆ ಮಿಲಿಟರಿ ಮತ್ತು ಆರ್ಥಿಕ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಚೀನೀ ಭಾಷೆಯನ್ನು ಪಠ್ಯದಿಂದ ಕೈಬಿಡಲಾಗಿದೆ. ಲಡಾಖ್ ಗಡಿಯಲ್ಲಿ ಚೀನಾದ ಸೇನೆಯೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಮೃತಪಟ್ಟ ಬಳಿಕ ಚೀನಾದ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಆಗ್ರಹ ಭಾರತದಲ್ಲಿ ಹೆಚ್ಚಾಗಿದೆ. ಜೂನ್‌ನಲ್ಲಿ ಕೇಂದ್ರ ಸರಕಾರ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ್ದರೆ, ಕಳೆದ ವಾರ ಮತ್ತೆ 47 ಚೀನೀ ಆ್ಯಪ್‌ಗಳ ಮೇಲೆ ನಿಷೇಧ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News