ಶಕುಂತಲಾ ದೇವಿ: ಒಲವೇ ಜೀವನ ಲೆಕ್ಕಾಚಾರ..!

Update: 2020-08-01 19:30 GMT

‘‘ಒಂದು ಕತೆಯ ಮಾರಾಟಕ್ಕಾಗಿ ಅದರಲ್ಲಿ ಸ್ವಲ್ಪಸುಳ್ಳನ್ನು ಬೆರೆಸಿದರೆ ಅದರಿಂದ ತಪ್ಪೇನು?’’ ಎಂದು ಮಗಳಲ್ಲಿ ಕೇಳುತ್ತದೆ ಶಕುಂತಲಾ ದೇವಿಯ ಪಾತ್ರ. ಶಕುಂತಲಾ ದೇವಿ ನಿಜಕ್ಕೂ ಆ ಮಾತು ಹೇಳಿದ್ದಾರೆ ಎಂದು ಹೇಳಲು ಈಗ ಉಳಿದಿರುವುದು ಮಗಳು ಮಾತ್ರ. ಒಂದು ವೇಳೆ ಆ ಮಾತು ಸುಳ್ಳಾಗಿದ್ದರೆ ಹಾಗೆ ಆಪಾದನೆ ಮಾಡಲು ಶಕುಂತಲಾ ದೇವಿ ಈಗ ಇಲ್ಲ. ಬಹುಶಃ ಅದೇ ಕಾರಣದಿಂದ ಇರಬೇಕು; ಪೂರ್ತಿ ಚಿತ್ರ ಮಗಳ ಕಣ್ಣೋಟದಲ್ಲಿ ಮೂಡಿ ಬಂದ ಹಾಗಿದೆ. ಆದುದರಿಂದ ಆರಂಭದಲ್ಲೇ ಹೇಳಿದ ವಾಕ್ಯ ಚಿತ್ರದ ನಿರ್ದೇಶಕರ ಅನಿಸಿಕೆಯೂ ಆಗಿರಬಹುದು. ತಾಯಿ ಶಕುಂತಲಾ ದೇವಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಮಗಳ ಪಾತ್ರದ ಮೂಲಕ ಚಿತ್ರ ಆರಂಭವಾಗುತ್ತದೆ. 

ಹಾಗೆ ಕುತೂಹಲಕರವಾಗಿ ಆರಂಭವಾಗುವ ಕತೆ ಶಕುಂತಲಾ ದೇವಿಯ ಬಾಲ್ಯದ ಬಗ್ಗೆ ಹೇಳುತ್ತದೆ. ಮೈಸೂರುಪಾಕ್ ಕೊಟ್ಟರೆ ಎಷ್ಟೇ ಕಠಿಣವಾದ ಲೆಕ್ಕದ ಸಮಸ್ಯೆಗಳೇ ಇದ್ದರೂ ಬಿಡಿಸಿ ಹೇಳುವ ಬಾಲಕಿ ಮನೆ ಮಂದಿಗೆ ಅಚ್ಚರಿಯಾಗುತ್ತಾಳೆ. ತಾನು ಇತರ ವಿದ್ಯಾರ್ಥಿಗಳಿಂತ ವಿಭಿನ್ನ ಎಂಬ ನಂಬಿಕೆ ಅವಳನ್ನು ಪ್ರತ್ಯೇಕವಾಗಿಸುತ್ತದೆ. ತನ್ನಿಂದ ತಂದೆ ವಿಶೇಷ ಲಾಭ ಮಾಡಿಕೊಳ್ಳುತ್ತಾರೆ ಎನ್ನುವ ಮನೋಭಾವ ಆಕೆಯಲ್ಲಿ ಮೂಡುತ್ತದೆ. ಈ ಬಗ್ಗೆ ತಿಳಿದರೂ ತಂದೆಯನ್ನೇ ಅನುಸರಿಸುವ ತಾಯಿಯ ಬಗ್ಗೆ ಒಂದು ಅಸಡ್ಡೆ ಆಕೆಯಲ್ಲಿರುತ್ತದೆ. ಇದೇ ಸಂದರ್ಭದಲ್ಲಿ ಮನೆಯಲ್ಲಿ ನಡೆಯುವ ಒಂದು ಸಾವು ಕೂಡ ಸೇರಿದಾಗ ಒಟ್ಟು ಶಕುಂತಲಾ ದೇವಿ ನಾರ್ಮಲ್ ಅಲ್ಲದ ಬಾಲ್ಯವನ್ನು ಕಾಣುತ್ತಾಳೆ.

ಶಕುಂತಲಾ ದೇವಿಯ ಪ್ರತಿಭೆಯಿಂದಾಗಿಯೇ ಆಕೆಗೆ ಲಂಡನ್‌ಗೆ ಹೋಗುವ ಅವಕಾಶ ಲಭಿಸುತ್ತದೆ. ಅಲ್ಲಿದ್ದಾಗಲೂ ಆಕೆಯಿಂದ ಹಣ ಬಯಸಿ ತಾಯಿಯಿಂದ ಪತ್ರ ಬಂದಾಗ, ಆಕೆಗೆ ತನ್ನ ಮನೆಯವರು ಧನದಾಹಿಗಳು ಎನ್ನುವ ಭಾವ ಮೂಡುತ್ತದೆ. ತಾನು ಇತರ ಮಹಿಳೆಯರ ಹಾಗೆ ಅಲ್ಲ, ಇತರರ ಹಾಗೆ ಅಲ್ಲ ಎನ್ನುವುದನ್ನು ಆಕೆಗಿರುವ ಅದ್ಭುತವಾದ ಗಣಿತದ ಜ್ಞಾನ ಸಾಬೀತು ಮಾಡುತ್ತಾ ಹೋಗುತ್ತದೆ. ಅದಕ್ಕೆ ತಕ್ಕಂತೆ ಆಕೆಯಲ್ಲಿಯೂ ಬದಲಾವಣೆಗಳಾಗುತ್ತವೆ. ಒಟ್ಟು ಚಿತ್ರದಲ್ಲಿ ಶಕುಂತಲಾ ದೇವಿ ಮಗಳಾಗಿ, ಪ್ರೇಯಸಿಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಹೇಗಿದ್ದರು ಎನ್ನುವುದನ್ನಷ್ಟೇ ಪ್ರಮುಖವಾಗಿ ಕೇಂದ್ರೀಕರಿಸಿದೆ.

ನಟನೆಯ ವಿಚಾರಕ್ಕೆ ಬಂದರೆ ವಿದ್ಯಾಬಾಲನ್ ಅಭಿನಯ ಶೈಲಿಯ ಬಗ್ಗೆ ಎರಡು ಮಾತಿಲ್ಲ. ಆದರೆ ಮದುವೆಯವರೆಗಿನ ಆಕೆಯ ನಟನೆಯಲ್ಲಿ ಎಲ್ಲಿ ಮತ್ತೆ ಸಿಲ್ಕ್ ಸ್ಮಿತಾ ಆವರಿಸಿಕೊಳ್ಳುತ್ತಿದ್ದಾಳೋ ಎನ್ನುವ ಶಂಕೆ ಮೂಡಿಸಿದ್ದು ಸುಳ್ಳಲ್ಲ! ಮಾತ್ರವಲ್ಲ, ಕನ್ನಡಿಗರು ಹಿಂದಿ, ಆಂಗ್ಲ ಭಾಷೆ ಮಾತನಾಡುವಾಗ ಉಂಟಾಗುವ ಉಚ್ಚಾರಣಾ ಶೈಲಿಗೂ, ತಮಿಳರ ಉಚ್ಚಾರಣೆಗೂ ಸ್ಪಷ್ಟ ವ್ಯತ್ಯಾಸವಿದೆ. ಬಹುಶಃ ನಿರ್ದೇಶಕರು ದಕ್ಷಿಣ ಭಾರತೀಯಳೆಂದು ನೈಜತೆ ಮೂಡಿಸುವ ಪ್ರಯತ್ನದಲ್ಲಿ ಎಡವಿರಬಹುದು. ಆದರೆ ಕ್ಲೈಮ್ಯಾಕ್ಸ್ ಸನ್ನಿವೇಶಗಳಲ್ಲಿ ಸ್ವತಃ ಶಕುಂತಲಾ ದೇವಿಯನ್ನೇ ಆವಾಹಿಸಿಕೊಂಡ ರೀತಿ ಕಾಣಿಸಿದ್ದಾರೆ ವಿದ್ಯಾ ಬಾಲನ್. ಬಾಲ್ಯದಲ್ಲಿ ಶಕುಂತಲಾ ದೇವಿಗೆ ತಂದೆಯ ಪಾತ್ರದಲ್ಲಿ ಕಾಣಿಸಿರುವ ಪ್ರಕಾಶ್ ಬೆಳವಾಡಿ ಎಂದಿನಂತೆ ಸಿಕ್ಕ ಪಾತ್ರದಲ್ಲಿ ಕುತೂಹಲ ಮೂಡಿಸುವ ಅಭಿನಯ ನೀಡಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ಅವರ ಕೈಯಲ್ಲಿ ಕಾಣಿಸುವ ಅಂದಿನ ಕನ್ನಡ ಪತ್ರಿಕೆ ‘ಅಜೇಯ’ ಕನ್ನಡಿಗ ಪ್ರೇಕ್ಷಕರಲ್ಲಿ ಹೆಮ್ಮೆ ಮೂಡಿಸುವುದರಲ್ಲಿ ಸಂದೇಹವಿಲ್ಲ. ಉಳಿದಂತೆ ಪತಿ ಐಎಎಸ್ ಅಧಿಕಾರಿ ಪರಿತೋಷ್ ಮುಖರ್ಜಿಯ ಪಾತ್ರಧಾರಿ ಜಿಷು ಸೇನ್ ಗುಪ್ತಾ, ಮಗಳು ಅನುವಾಗಿ ಸಾನ್ಯ ಮಲ್ಹೋತ್ರಾ, ಅನುವಿನ ಪತಿ ಅಭಯ್ ಪಾತ್ರದಲ್ಲಿ ಅಮಿತ್ ಸದ್ ಚೆನ್ನಾಗಿ ನಟಿಸಿದ್ದಾರೆ. ಸಂಭಾಷಣೆ, ಸಂಗೀತ ಚೆನ್ನಾಗಿವೆ.

 ಶಕುಂತಲಾ ದೇವಿಯ ಚಿತ್ರ ಎನ್ನುವಾಗ ಅವರ ಗಣಿತ ಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಏನಾದರೂ ಲಭಿಸಬಹುದು ಎನ್ನುವ ನಿರೀಕ್ಷೆ ಸಹಜ. ಆದರೆ ಅದನ್ನೂ ಸೇರಿದಂತೆ ಆಕೆಯ ವಿಶಿಷ್ಠ ಗುಣಗಳನ್ನೆಲ್ಲ ಸಣ್ಣದಾಗಿ ನೆನಪಿಸಿದ್ದಾರೆ. ಹಾಗಾಗಿ ಸಂಬಂಧಗಳ ಬಗ್ಗೆ ಗೊಂದಲ ಹೊಂದಿರುವ ಒಬ್ಬ ಮಹಿಳೆಯ ಸಿನೆಮಾ ಮಾಡುವುದಾದರೆ ಅದಕ್ಕೆ ಶಕುಂತಲಾ ದೇವಿಯ ಪಾತ್ರವೇ ಯಾಕೆ ಬೇಕಿತ್ತು ಎನ್ನುವ ಜಿಜ್ಞಾಸೆ ಕಾಡದಿರದು. ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡಿದ್ದೇಕೆ? ಅದರಲ್ಲಿಯೂ ಇಂದಿರಾ ಗಾಂಧಿಯ ಎದುರು ಸ್ಪರ್ಧಿಸಿದ್ದೇಕೆ? ಹೋಮೋ ಸೆಕ್ಸುವಾಲಿಟಿ ಬಗ್ಗೆ ಭಾರತದಲ್ಲೇ ಮೊದಮೊದಲು ಪುಸ್ತಕ ರಚಿಸಿದ ಕೀರ್ತಿ ಶಕುಂತಲಾ ದೇವಿಯದ್ದು ಎನ್ನಲಾಗುತ್ತದೆ. ಅದಕ್ಕೆ ತನ್ನ ಪತಿ ಒಬ್ಬ ಹೋಮೋ ಆಗಿದ್ದರು ಎಂದು ಆಕೆ ಹೇಳಿಕೊಂಡಿರುವುದು ಸುಳ್ಳಾದರೆ (ಚಿತ್ರದಲ್ಲಿ ತೋರಿಸಿದಂತೆ) ನಿಜವಾದ ಕಾರಣಗಳೇನು? ಜ್ಯೋತಿಷ್ಯದ ಕಡೆಗೆ ವಾಲಿದ್ದೇಕೆ? ನಿಜಕ್ಕೂ ಗಣಿತದ ಮೂಲಕ ಜ್ಯೋತಿಷ್ಯ ಸಾಧ್ಯವೇ? ಮೊದಲಾದ ಪ್ರಶ್ನೆಗಳನ್ನು ಸಿನೆಮಾ ಪ್ರಶ್ನೆಯಾಗಿಯೇ ಉಳಿಸುತ್ತದೆ.

ಇಷ್ಟಕ್ಕೂ ಚಿತ್ರ ಆರಂಭಕ್ಕೂ ಮುನ್ನವೇ ಇದು ಶಕುಂತಲಾ ದೇವಿಯವರ ಬದುಕಿನ ಘಟನೆಗಳಿಂದ ಸ್ಫೂರ್ತಿ ಪಡೆದ ಚಿತ್ರವೇ ಹೊರತು ಸಂಪೂರ್ಣವಾಗಿ ಶಕುಂತಲಾ ದೇವಿಯ ಬಯಾಗ್ರಫಿ ಎಂದು ಹೇಳಿಕೊಳ್ಳುವುದಿಲ್ಲ ಎಂದು ಡಿಸ್ಕ್ಲೈಮರ್ ಹಾಕಿರುವುದರಿಂದ ಇರುವ ಹೋಲಿಕೆಗಳಿಗೆ ತೃಪ್ತಿ ಪಡುವುದಷ್ಟೇ ನಮ್ಮ ಕೆಲಸ. ಒಟ್ಟಿನಲ್ಲಿ ಶಕುಂತಲಾ ದೇವಿ ವಿದೇಶದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಿದ್ದು ಮತ್ತು ತಾಯಿ ಮಗಳ ನಡುವಿನ ಬಾಂಧವ್ಯವನ್ನು ಹೊರತೋರುವ ಹೃದಯಸ್ಪರ್ಶಿ ದೃಶ್ಯಗಳ ವೀಕ್ಷಣೆಗಾಗಿ ಚಿತ್ರವನ್ನೊಮ್ಮೆ ನೋಡಬಹುದು.

ತಾರಾಗಣ: ವಿದ್ಯಾ ಬಾಲನ್, ಪ್ರಕಾಶ್ ಬೆಳವಾಡಿ
ನಿರ್ದೇಶಕ: ಅನು ಮೆನನ್
ನಿರ್ಮಾಣ: ಸೋನಿ ಪಿಕ್ಚರ್ಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News