ಹೆಂಗ್ ಪುಂಗ್ ಲೀ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈ ಪ್ರಲಾಪ...!

Update: 2020-08-01 19:30 GMT

ರಫೇಲ್ ಬಂದ ಸುದ್ದಿ ಕೇಳಿದ್ದೇ ಪತ್ರಕರ್ತ ಎಂಜಲು ಕಾಸಿಗೆ ಆನೆ ಬಲ ಬಂದಂತಾಯಿತು. ಈ ರಫೇಲ್‌ಗೆ ಹೆದರಿ ಚೀನಾ ಸೈನಿಕರು ಮಾತ್ರವಲ್ಲ, ಕೊರೋನ ಕೂಡ ಅತಿ ಬೇಗ ಚೀನಾವನ್ನು ಮರಳಿ ಸೇರಲಿದೆ ಎನ್ನುವ ಧೈರ್ಯದಿಂದ ಮನೆಯಿಂದ ಹೊರಗೆ ಬಂದ. ರಫೇಲ್ ಬಂದ ಖುಷಿಯಲ್ಲಿ ಚೌಕಿದಾರನನ್ನು ಇಂಟರ್ಯೂ ಮಾಡಿದರೆ ಹೇಗೆ? ಎನ್ನುತ್ತಾ ಸೀದಾ ಅಂಬಾನಿ ಮನೆಗೆ ಹೋದರೆ, ಅಲ್ಲಿ ಚೌಕಿದಾರ್ ಇರಲಿಲ್ಲ. ಯಾರನ್ನೋ ಕೇಳಿದರೆ, ‘ಅಂಬಾನಿ ಸಾಹೇಬರೂ, ಚೌಕಿದಾರರು ರಫೇಲ್ ವಿಮಾನದಲ್ಲಿ ಹನಿಮೂನ್ ಹೋಗಿದ್ದಾರೆ....ಅದೂ ಚೀನಾದ ಗಡಿಗೆ...’’ ಉತ್ತರ ಹೇಳಿದವನ ಮುಖನೋಡಿದರೆ ಸುಳ್ಳಿನ ಬೆಳೆ ಚರ್ಕವರ್ತಿಯಂತೆ ಇತ್ತು. ‘‘ನೀವು ಸುಳ್ಳಿನ ಬೆಳೆ ಚರ್ಕವರ್ತಿಯಲ್ಲವೇ?’’

ಅಲ್ಲ, ಅಲ್ಲ ಎನ್ನುತ್ತಾ ಆತ ತಲೆ ಮರೆಸಿ ಓಡಲು ನೋಡಿದ. ಇನ್ನೊಂದು ಕೋನದಿಂದ ನೋಡುವಾಗ ಯಾವುದೋ ಚೀನಿ ಪ್ರಜೆಯಂತೆ ಕಂಡ ‘‘ಗೊತ್ತಾಯಿತು...ನೀವು ಹೆಂಗ್ ಪುಂಗ್ ಲೀ ಅವರಲ್ಲವೇ? ಇತ್ತೀಚಿನ ಟ್ರೋಲ್‌ಗಳಿಗೆ ಹೆದರಿ ದಿಲ್ಲಿ ಸೇರಿದ್ದೀರಂತೆ ಹೌದೆ?’’

‘‘ಹೇ....ನಾನು ಹೆಂಗ್ ಪುಂಗ್ ಲೀ ಅಲ್ಲರೀ....’’ ಎಂದು ಮುಖಕ್ಕೆ ಪತ್ರಿಕೆ ಅಡ್ಡ ಹಿಡಿದ. ಕನ್ನಡದ ಪತ್ರಿಕೆ. ಮತ್ತೊಮ್ಮೆ ಆತನನ್ನೇ ನೋಡಿದ. ಕರುಳು ಕಿತ್ತು ಬರುವಂತಿದ್ದ....‘‘ಸಾರ್...ಹಾಗಾದರೆ ನೀವು ಕಕಿಬಕ ಅಲ್ಲವೇ?

ಈಗ ಅನಿವಾರ್ಯವಾಗಿ ತಲೆತಗ್ಗಿಸಿ ಒಪ್ಪಿಕೊಂಡ. ಅಷ್ಟರಲ್ಲಿ ಅವನ ಕಿಸೆಯೊಳಗಿಂದ ಯಾರೋ ಇಣುಕಿದಂತಾಯಿತು. ‘‘ಸಾರ್, ನಿಮ್ಮ ಅಂಗಿಯ ಜೇಬಿನೊಳಗೆ ಯಾರೋ ಇದ್ದಾರೆ....’’ ಕಾಸಿ ಹೇಳಿದ.

ಈಗ ಜೇಬಿನೊಳಗಿರುವ ವ್ಯಕ್ತಿ ಮೆಲ್ಲಗೆ ತಲೆ ಪೂರ್ಣವಾಗಿ ಹೊರ ಹಾಕಿದ. ಕಾಸಿ ಒಮ್ಮೆಲೆ ಬೆಚ್ಚಿ ಬಿದ್ದ ‘‘ನೀವು...ಡ್ರೋನ್ ಪ್ರಲಾಪ ಅಲ್ಲವೇ?’’ ಕೇಳಿದ. ಜೇಬಿನಿಂದ ಒಮ್ಮೆಲೆ ಕೆಳಗೆ ಹಾರಿದ ಪ್ರಲಾಪ ‘‘ಹೌದು ಸಾರ್...ಅಮೆರಿಕದಲ್ಲಿ ವಿಜ್ಞಾನಿಗಳ ಒಂದು ಮೀಟಿಂಗ್ ಇತ್ತು ಸಾರ್. ಅದನ್ನು ಮುಗಿಸಿ, ಒಂದು ಲಕ್ಷ ರೂಪಾಯಿಯ ತಾಳಿ ಊಟ ಉಂಡು, ಹಂಗೇನೆ ಟಾಮ್ ಕ್ರೂಜ್‌ಗೆ ಒಂದು ಆಟೋಗ್ರಾಫ್ ಕೊಟ್ಟು ಈಗಷ್ಟೇ ದಿಲ್ಲಿಗೆ ಬಂದು ಗುರುಗಳ ಜೇಬಿನಲ್ಲಿ ಕುಳಿದು ವಿಶ್ರಾಂತಿ ತೆಗೋತಾ ಇದ್ದೆ ಸಾರ್...’’

‘‘ನಿಮಗಾಗಿ ಅಲ್ಲಿ ಕರ್ನಾಟಕದೋರು ಹುಡುಕ್ತಾ ಇದ್ದಾರೆ ಸಾರ್...’’ ಕಾಸಿ ಹೇಳಿದ.
 ‘‘ಇಡೀ ದೇಶಕ್ಕೆ ನಾನೊಬ್ಬನೇ ಡ್ರೋನ್ ತಂತ್ರಜ್ಞ ಇರೋದು. ಎಲ್ಲೀಂತ ಕೆಲಸ ಮಾಡ್ಲಿ. ಯಡಿಯೂರಪ್ಪ ಅವರು ತಮಗಾಗಿ ಒಂದು ವಿಶೇಷ ಹೆಲಿಕಾಪ್ಟರ್ ನಿರ್ಮಾಣ ಮಾಡಿಕೊಡೋಕೆ ಹೇಳಿದ್ರು....ಬಹುಶಃ ಅದಕ್ಕಾಗಿ ಹುಡುಕಾಡ್ತ ಇರಬೇಕು...’’
‘‘ಸರ್...ದಿಲ್ಲಿಯಲ್ಲಿ ಏನು ಮಾಡ್ತಾ ಇದ್ದೀರಿ?’’ ಕಾಸಿ ಕೇಳಿದ.

‘‘ಅದೇ...ಅಮೆರಿಕದಲ್ಲಿ ವಿಜ್ಞಾನಿಗಳ ಸಮಾವೇಶ ಇತ್ತಲ್ಲ? ಅಲ್ಲಿ ನಾನು ಒಂದು ಪೇಪರ್ ಪ್ರಸೆಂಟ್ ಮಾಡಿದೆ. ಇಡೀ ದೇಶ ಚಪ್ಪಾಳೆ ಹೊಡೀತು....ಹೊಡೀತು ಹೊಡೀತು....ಟ್ರಂಪ್ ಅವರು ಸಾಕು ನಿಲ್ಲಿಸಿ ಎಂದ ಮೇಲೆ ಎಲ್ರೂ ನಿಲ್ಲಿಸಿದರು. ಅಷ್ಟರಲ್ಲಿ ಪ್ರಧಾನಿ ಮೋದಿಯವರು ಪೋನ್ ಮಾಡಿದರು. ಫ್ರಾನ್ಸ್‌ನಿಂದ ರಫೇಲ್ ಬಂತಲ್ಲ...ಇದರ ಇಂಜಿನ್ ಸ್ಟಾರ್ಟ್ ಆಗಲ್ಲ...ಬಂದು ನೋಡು ಅಂತ...ನನಗೆ ಅಮೆರಿಕ ಮುಖ್ಯ ಅಲ್ಲ, ನನ್ನ ದೇಶ ಮುಖ್ಯ. ರೈತನ ಮಗ ನಾನು....ಏನು ಮಾಡೋದು? ಅರ್ಜಂಟಾಗಿ ಮೋದಿಯವರು ಕರೀತಾ ಇದ್ದಾರೆ...ಅಂದರೆ ಬರೇ 2 ಗಂಟೆಗಳಲ್ಲಿ ತಲುಪಬೇಕು. ನನಗಾಗಿ ವಿಶೇಷ ವಿಮಾನ ಮಾಡಿಕೊಡಲು ಟ್ರಂಪ್ ಮುಂದೆ ಬಂದರು. ಆದರೆ ನಾನು 2 ಗಂಟೆಗಳಲ್ಲಿ ತಲುಪಬೇಕಲ್ಲ? ತಕ್ಷಣ ‘ನನಗೆ ಒಂದು ಮಿಕ್ಸಿ ಬೇಕು’ ಎಂದೆ. ಕೊಟ್ಟರು. ಅದನ್ನು ಬಳಸಿ ಕಾಲು ಗಂಟೆಯಲ್ಲಿ ಒಂದು ಡ್ರೋನ್ ಮಾಡಿದೆ. ಅದರ ಮೇಲೆ ಹತ್ತಿ ಸ್ಟಾರ್ಟ್ ಮಾಡಿದೆ. ಹಾರ್ತು...ಒಂದು ಕಿ.ಮೀ...ಹಾರ್ತು...ಎರಡು ಕಿ.ಮೀ...ಹಾರ್ತು...ಕೊನೆಗೆ ನೋಡಿದರೆ ಮಾನ ಮರ್ಯಾದೆ ಎಲ್ಲ ಬಿಟ್ಟು ಮೇಲೆ ಹಾರ್ತು......ಬರೇ ಎರಡು ಗಂಟೆಯಲ್ಲಿ ಮೋದಿ ಪಕ್ಕ ಇದ್ದೆ....’’
 
ಡ್ರೋನ್ ಪ್ರಲಾಪ ಹೀಗೆಂದು ಡ್ರೋನ್ ಹಾರಿಸುತ್ತಿರುವಾಗ, ತನ್ನ ಶಿಷ್ಯನ ಸಾಧನೆಗೆ ಕಕಿಬಕ ಅಚ್ಚರಿಯಿಂದ ಇಡಬಾರದ ಜಾಗದಲ್ಲಿ ಬೆರಳಿಟ್ಟು ಕೊಂಡರು. ‘‘ಮತ್ತೇನಾಯಿತು ಸಾರ್...?’’ ಕಾಸಿ ಸ್ಕೂಪ್ ಸುದ್ದಿ ಸಿಕ್ಕಿತು ಎಂಬ ಸಂಭ್ರಮದಲ್ಲಿ ಎಲ್ಲವನ್ನು ಬರೆಯುತ್ತಿದ್ದ.

‘‘ಬಂದು ನೋಡ್ತಾ ಇದ್ದೇನೆ....ರಫೇಲ್ ಸ್ಟಾರ್ಟ್ ಆಗ್ತಾ ಇಲ್ಲ. ದೇಶದ ಮರ್ಯಾದೆ ಪ್ರಶ್ನೆ. ನನಗೆ ದೇಶ ಮುಖ್ಯ. ತಕ್ಷಣ ‘‘ಒಂದು ಮಿಕ್ಸಿ ತನ್ನಿ’ ಎಂದೆ. ಚೌಕಿದಾರರು ಓಡಿ ಹೋಗಿ ಒಂದು ಮಿಕ್ಸಿ ತಂದರು. ಇಡೀ ದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿ ರಸ ತೆಗೆದ ಮಿಕ್ಸಿ ಅದು. ಅದರ ಒಳಗೆ ಒಂದು ಇಂಜಿನ್ ಇತ್ತು. ಅದನ್ನು ತೆಗೆದು ರಫೇಲ್ ವಿಮಾನಕ್ಕೆ ಜೋಡಿಸಿದೆ. ಅಷ್ಟೇ...ಹಾರ್ತು ಹಾರ್ತು...ಹಾರ್ತೂ....ಮಾನ ಮರ್ಯಾದೆ ಎಲ್ಲ ಬಿಟ್ಟು ಹಾರ್ತು....’’
‘‘ಸಾರ್...ಇದೆಲ್ಲ ನಿಜಾನ?’’ ಕಾಸಿ ನಂಬಲಾರದೆ ಕೇಳಿದ.
‘‘ಬೇಕಾದರೆ ನನ್ನ ಗುರುಗಳನ್ನೇ ಕೇಳಿ...’’ ಎಂದು ಕಕಿಬಕನ ಕಡೆಗೆ ಕೈ ತೋರಿಸಿದ.

‘‘ಹೂಂ ಕಣ್ರೀ...ಏನದ್ಭುತ ಅಂತೀರಾ...ಈ ಪ್ರಲಾಪ ಪ್ರಧಾನಮಂತ್ರಿಯವರ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಇನ್ ಇಂಡಿಯಾದ ಕೂಸು ಕಣ್ರೀ.....ಮೋದಿಯವರು ಪ್ರಧಾನಿಯಾಗಿರುವುದರಿಂದಲೇ ಡ್ರೋನ್ ಪ್ರಲಾಪನಂತಹ ಪ್ರತಿಭಾವಂತ ವಿಜ್ಞಾನಿಗಳು ಈ ದೇಶದಲ್ಲಿ ಹುಟ್ಟಲು ಕಾರಣವಾಯಿತು. ಪ್ರಧಾನಿ ಮೋದಿಯವರು ಬರೋ ಮೊದಲು ಈ ದೇಶದಲ್ಲಿ ವಿಜ್ಞಾನಿಗಳೇ ಇದ್ದಿರಲಿಲ್ಲ ಕಣ್ರೀ....ಈ ಪ್ರಲಾಪನ್ನ ನೋಡಿದ್ರೆ ನನ್ನ ಕರುಳು ಕಿತ್ತು ಬರುತ್ತೆ ಕಣ್ರೀ...’’ ಎಂದು ಕಕಿಬಕ ಕಣ್ಣೀರು ಇಡತೊಡಗಿದ.

‘‘ಸಾರ್...ಪ್ರಲಾಪ್ ಡ್ರೋನ್ ಹಾರಿಸಲು ಕಲಿತದ್ದೇ ನಿಮ್ಮಿಂದ ಅಂತೆ ಹೌದೆ?’’ ಕಾಸಿ ಕೇಳಿದ.
‘‘ಹೂಂ...ಹೆಂಗ್ ಪುಂಗ್ ಲೀ ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಡ್ರೋನ್ ವಿಭಾಗದ ರ್ಯಾಂಕ್ ಸ್ಟೂಡೆಂಟ್ ಈ ಪ್ರಲಾಪ. ಈತ ಶಾಲೆ ಬಿಟ್ಟು ಬೀದಿ ಬೀದಿ ಅಲೆಯುತ್ತಾ ಕಾಗೆ ಹಾರಿಸುತ್ತಿದ್ದ. ಆಗ ನನಗೆ ಇವನ ಪ್ರತಿಭೆ ಗಮನಕ್ಕೆ ಬಂದು, ಬೀದೀಲಿ ಹೀಗೆ ಕಾಗೆ ಹಾರಿಸಬೇಡ...ನನ್ನ ಹೆಂಗ್ ಪುಂಗ್ ಲೀ ವಿಶ್ವವಿದ್ಯಾನಿಲಯದಲ್ಲಿ ನಿನಗೊಂದು ಸೀಟ್ ಕೊಡಿಸ್ತೇನೆ. ಮೋದಿಯವರು ಅದರ ಶುಲ್ಕವನ್ನು ಈಗಾಗಲೇ ಭರ್ತಿ ಮಾಡಿದ್ದಾರೆ. ನೀನು ಭಾರತಕ್ಕೆ ಬೇಕಾದ ಒಂದಿಷ್ಟು ಡ್ರೋನ್ ನಿರ್ಮಾಣ ಮಾಡಿಕೊಡು...ಎಂದೆ...ನಾನು ಇವನಿಗೆ ರೆಕ್ಕೆಯಿರುವ ಡ್ರೋನ್ ಮಾಡೋದನ್ನು ಹೇಳಿಕೊಟ್ಟರೆ, ಇವನು ರೆಕ್ಕೆಯೇ ಇಲ್ಲದ ಡ್ರೋನ್ ಮಾಡಿ ಹಾರಿಸಿ ಬಿಡೋದೆ?’’ ಎಂದು ಶಿಷ್ಯನ ಸಾಧನೆ ವಿವರಿಸಿದ. ‘‘ನೋಡಿ ಯಾರಲ್ಲೂ ಹೇಳಬೇಡಿ...ಗುಟ್ಟಿನ ವಿಷಯ....ಎರಡನೇ ಬಾರಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೀತಲ್ಲ? ಆಗ ಹತ್ತು ಪ್ರಬಲವಾದ ಡ್ರೋನ್‌ನ್ನು ಪಾಕಿಸ್ತಾನದ ಕಡೆಗೆ ಬಿಡಲಾಯಿತು. ಆ ಹತ್ತು ಡ್ರೋನ್ ತಯಾರಿ ಮಾಡಿದ್ದೇ ಈ ಪ್ರಲಾಪ...’’ ಎಂದು ಬೆನ್ನು ತಟ್ಟಿದ. ದಿಲ್ಲಿಯ ಚಳಿಯಲ್ಲೂ ಕಾಸಿ ಬೆವರಿ ಹೇಳಿದ ‘‘ಸರಿ ಸಾರ್, ನಾನು ಬರ್ತೀನಿ....’’

‘‘ಹೆಂಗ್ ಹೋಗ್ತೀರಿ...ನನ್ನ ಡ್ರೋನ್ ಮೇಲೆ ಹತ್ಕೊಂಡು ಹೋಗಿ...’’ ಪ್ರಲಾಪ ಆಹ್ವಾನ ನೀಡಿದ್ದೇ ತಡ, ‘‘ಬೇಡ ಸಾರ್...ಬೆಂಗಳೂರಿಗೆ ಹೋಗುವ ಲಾರಿಗಳಿವೆ. ಅದರಲ್ಲಿ ಹತ್ತಿ ಹೋಗುತ್ತೇನೆ’’ ಎಂದು ಅಲ್ಲಿಂದ ಓಡತೊಡಗಿದ.

Writer - ಚೇಳಯ್ಯ, chelayya@gmail.com

contributor

Editor - ಚೇಳಯ್ಯ, chelayya@gmail.com

contributor

Similar News