ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ: ಸದಸ್ಯ ರಾಜ್ಯಗಳ ಸಂಖ್ಯೆ 24ಕ್ಕೆ ಏರಿಕೆ

Update: 2020-08-02 17:51 GMT

ಹೊಸದಿಲ್ಲಿ, ಆ.2: ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆಗೆ ಆಗಸ್ಟ್ 1ರಿಂದ ಅನ್ವಯಿಸುವಂತೆ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರ್ಪಡೆಯಾಗಿದ್ದು ಸದಸ್ಯರ ಸಂಖ್ಯೆ 24ಕ್ಕೇರಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಶನಿವಾರ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡ ರಾಜ್ಯಗಳು ಹೊಸ ಸೇರ್ಪಡೆಯಾಗಿವೆ. ದೇಶದಾದ್ಯಂತ ಎಲ್ಲಾ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 2021ರ ಮಾರ್ಚ್ 31ರಿಂದ ಪಡಿತರ ಚೀಟಿ ಪೋರ್ಟೆಬಿಲಿಟಿ(ವರ್ಗಾಯಿಸುವಿಕೆ) ಪ್ರಕ್ರಿಯೆಯನ್ನು ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಇದರೊಂದಿಗೆ ಎನ್‌ಎಫ್‌ಎಸ್‌ಎ(ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ) ವ್ಯಾಪ್ತಿಗೆ ಒಳಪಡುವ ಸುಮಾರು 65 ಕೋಟಿ (80%) ಜನತೆ , ದೇಶದ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಪಡಿತರ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಸಿಗುತ್ತದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ಎನ್‌ಎಫ್‌ಎಸ್‌ಎ ಫಲಾನುಭವಿಗಳಾದ ವಲಸೆ ಕಾರ್ಮಿಕರು ಉದ್ಯೋಗ ಅರಸುತ್ತಾ ಆಗಿಂದಾಗ್ಗೆ ತಮ್ಮ ನೆಲೆಯನ್ನು ಬದಲಾಯಿಸುತ್ತಿರುತ್ತಾರೆ. ಇಂತಹ ಕಾರ್ಮಿಕರು ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿದ್ದರೂ ಅಲ್ಲಿಯ ಪಡಿತರ ಕೇಂದ್ರದಿಂದ ತಮ್ಮ ಪಾಲಿನ ಪಡಿತರ ಪಡೆಯಲು ಅನುಕೂಲವಾಗುತ್ತದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News