​ಆಡು ಕೊಂದ ಆರೋಪ : ದಲಿತ ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ

Update: 2020-08-03 04:20 GMT

ರಾಂಚಿ : ಆಡು ಕೊಂದ ಆರೋಪದಲ್ಲಿ ಇಬ್ಬರು ದಲಿತ ಯುವಕರನ್ನು ಮರಕ್ಕೆ ಕಟ್ಟಿಹಾಕಿ ನೂರಾರು ಮಂದಿ ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಲ್ಲದೇ, ಬಲವಂತವಾಗಿ ಎಂಜಲು ನೆಕ್ಕಿಸಿದ ಅಮಾನವೀಯ ಘಟನೆ ಗಿರಿಧ್ ಜಿಲ್ಲೆಯಲ್ಲಿ ನಡೆದಿದೆ.

ಮುಪ್ಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗಗರ್‌ದಿಹಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯಾಧವ ಸಮುದಾಯದವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಬಳಿಕ ಗ್ರಾಮಸ್ಥರು ಪಂಚಾಯ್ತಿ ನಡೆಸಿ ಆಡಿನ ಮಾಲಕರಿಗೆ ಯುವಕರು 60 ಸಾವಿರ ರೂ. ಪಾವತಿಸಬೇಕು ಎಂದು ಸೂಚಿಸಿದ್ದಾರೆ.

ಸೋಮವಾರ ನಮ್ಮ ಹೊಲಕ್ಕೆ ಆಡುಗಳು ಬಂದಿದ್ದವು. ಆಗ ದೊಣ್ಣೆಯಿಂದ ಹೊಡೆದು ಅದನ್ನು ಹೊರಕ್ಕೆ ಅಟ್ಟಿದ್ದೆವು. ನಾವು ಆಡುಗಳನ್ನು ಎಳೆದೊಯ್ಯುತ್ತಿರುವುದನ್ನು ನೋಡಿದ ಮಾಲಕ, ನಮ್ಮನ್ನೂ ಜತೆಗೆ ಕರೆದೊಯ್ದು ಆಡುಗಳ ಕತ್ತು ಸೀಳಿ ನಮ್ಮ ಆವರಣಕ್ಕೆ ಎಸೆದಿದ್ದಾನೆ. ನಾವು ಅದನ್ನು ಕೊಂದಿದ್ದಾಗಿ ಆರೋಪಿಸಿದ್ದ. ಬಳಿಕ ಮಂಗಳವಾರ ನನ್ನನ್ನು ಹಾಗೂ ಶಂಕರ್ ಕುಮಾರ್ ದಾಸ್ ಎಂಬಾತನನ್ನು ನಮ್ಮ ಮನೆಗಳಿಂದ ಎಳೆದೊಯ್ದು ಮರಕ್ಕೆ ಕಟ್ಟಿಹಾಕಿ ಮುಖ್ಯರ ಸಮ್ಮುಖದಲ್ಲಿ ಹಲ್ಲೆ ಮಾಡಿದ್ದಾರೆ. ನೂರಾರು ಮಂದಿಯ ಸಮ್ಮುಖದಲ್ಲಿ ಎಂಜಲು ನೆಕ್ಕುವಂತೆ ಬಲವಂತಪಡಿಸಿದರು ಎಂದು ಸಂತ್ರಸ್ತ ಪ್ರೇಮಾನಂದ್ ಕುಮಾರ್ ದಾಸ್ ಆಪಾದಿಸಿದ್ದಾರೆ. ಆಡು ಕೊಂದ ಆರೋಪಕ್ಕಾಗಿ 60 ಸಾವಿರ ರೂ. ದಂಡ ವಿಧಿಸಿದ್ದು, ಅದನ್ನು ಪಾವತಿಸಿದ ಬಳಿಕವಷ್ಟೇ ಬಿಡುಗಡೆ ಮಾಡಿದ್ದಾರೆ ಎಂದು ದೂರಲಾಗಿದೆ.

ಆಡುಗಳ ಕತ್ತು ಸೀಳಿದಂತೆ ನಿಮ್ಮ ಕುತ್ತಿಗೆಯನ್ನೂ ಸೀಳುತ್ತೇವೆ ಎಂದು ಯಾದವ ಸಮುದಾಯದವರು ಬೆದರಿಕೆ ಹಾಕಿದ್ದಾರೆ ಎನ್ನುವುದು ಅವರ ದೂರು. ಕುಟುಂಬದವರು ಮಧ್ಯಸ್ಥಿಕೆಗೆ ತೆರಳಿದಾಗ ಅವರನ್ನೂ ಗ್ರಾಮಸ್ಥರು ಥಳಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News