2019ನೆ ಸಾಲಿನ ಯುಪಿಎಸ್ ಸಿ ಫಲಿತಾಂಶ ಪ್ರಕಟ: ಪ್ರದೀಪ್ ಸಿಂಗ್, ಪ್ರತಿಭಾ ವರ್ಮಾ ಟಾಪರ್ ಗಳು

Update: 2020-08-04 17:49 GMT

ಹೊಸದಿಲ್ಲಿ, ಆ. 4: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2019ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಪ್ರದೀಪ್ ಸಿಂಗ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಜತಿನ್ ಕಿಶೋರ್ ಹಾಗೂ ಪ್ರತಿಭಾ ವರ್ಮಾ ಅನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

2019ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಒಟ್ಟು 829 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 2019 ಸೆಪ್ಟಂಬರ್‌ನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆ, 2020 ಫೆಬ್ರವರಿ-ಆಗಸ್ಟ್ ‌ನಲ್ಲಿ ನಡೆಸಿದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಯುಪಿಎಸ್‌ಸಿ ಪ್ರಕಟಿಸಿದೆ.

ಈ 829 ಅಭ್ಯರ್ಥಿಗಳಲ್ಲಿ ಐಎಎಸ್ (ಇಂಡಿಯನ್ ಅಡ್ಮಿನಿಸ್ಟ್ರೇನ್ ಸರ್ವೀಸ್) 180, ಐಎಫ್‌ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 24, ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) 150 ಹಾಗೂ ಕೇಂದ್ರ ಸರಕಾರದ ‘ಎ’ ಗ್ರೂಪ್ ಹುದ್ದೆಗೆ 438 ಹಾಗೂ ‘ಬಿ’ ಗ್ರೂಪ್ ಹುದ್ದೆಗೆ 135 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಸಾಮಾನ್ಯ ವರ್ಗದ 304, ಆರ್ಥಿಕ ಹಿಂದುಳಿದ ವರ್ಗದ 78 , ಹಿಂದುಳಿದ ವರ್ಗದ 251, ಪರಿಶಿಷ್ಟ ಜಾತಿಯ 129, ಪರಿಶಿಷ್ಟ ಪಂಗಡದ 67 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಟಾಪ್ 10ರ ಪಟ್ಟಿಯಲ್ಲಿ ಮೂವರು ಹಾಗೂ ಟಾಪ್ 25ರ ಶ್ರೇಯಾಂಕದಲ್ಲಿ ಕನಿಷ್ಠ 9 ಮಹಿಳೆಯರು ಇದ್ದಾರೆ.

42 ಮುಸ್ಲಿಮ್ ಅಭ್ಯರ್ಥಿಗಳು ಉತ್ತೀರ್ಣ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2019ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯಲ್ಲಿ ಒಟ್ಟು 42 ಮುಸ್ಲಿಮ್ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ 2018ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಗೆ ಹೋಲಿಸಿದರೆ ಈ ಭಾರಿಯ ಪರೀಕ್ಷೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

 ಆದರೆ, ಬೇಸರದ ವಿಚಾರ ಏನೆಂದರೆ, 2019ರ ಟಾಪ್ 100ರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿ ಮಾತ್ರ ಸ್ಥಾನ ಪಡೆದು ಕೊಂಡಿರುವುದು.

ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಮುಸ್ಲಿಂ ಅಭ್ಯರ್ಥಿ ಸಫ್ನಾ ನಝರುದ್ದೀನ್. ಅವರು 45ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News