ಭಾರೀ ಮಳೆಗೆ ನಲುಗಿದ ಮುಂಬೈ ರಸ್ತೆ, ರೈಲು ಸಂಚಾರಕ್ಕೆ ತೊಡಕು; ಜನಜೀವನ ಅಸ್ತವ್ಯಸ್ತ

Update: 2020-08-04 18:20 GMT

ಮುಂಬೈ, ಆ.4: ಮುಂಬೈ ಮತ್ತು ನೆರೆಯ ಪ್ರದೇಶಗಳಲ್ಲಿ ಸೋಮವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ಸಾರಿಗೆ ಮತ್ತು ರೈಲು ಸಂಚಾರಕ್ಕೆ ತೊಡಕುಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣ, ಕೊರೋನ ಸೋಂಕಿತರು ದಾಖಲಾಗಿರುವ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳಲು ಆರೋಗ್ಯ ಕಾರ್ಯಕರ್ತರು ಹೆಣಗಾಡುವಂತಾಗಿದೆ ಎಂದು ವರದಿಯಾಗಿದೆ.

ಸೋಮವಾರ ರಾತ್ರಿಯಿಂದ ಮುಂಬೈ ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ 200 ಮಿ.ಮೀಗೂ ಅಧಿಕ ಮಳೆ ಸುರಿದಿದೆ. ಈ ಮಧ್ಯೆ, ಭಾರೀ ಮಳೆ ಮುಂದಿನ 48 ಗಂಟೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ. ರೈಲು ಹಳಿಗಳ ಮೇಲೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳಲ್ಲಿ ಲೋಕಲ್ ಟ್ರೈನ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಅಗತ್ಯ ಸೇವೆಗಳ ಸಿಬಂದಿಗಳಿಗೆ ಮಾತ್ರ ಈಗ ಲೋಕಲ್ ರೈಲುಗಳಲ್ಲಿ ಸಂಚರಿಸಲು ಅನುಮತಿಯಿದ್ದು, ಈ ಸಿಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಬೈಕುಲಾ, ದಾದರ್ ಮತ್ತು ಮಹಾಲಕ್ಷ್ಮಿ ಸಮೀಪದ ಕೆಲವು ರಸ್ತೆಗಳಲ್ಲಿ ನೀರು ತುಂಬಿದ್ದ ಕಾರಣ ಈ ಮಾರ್ಗದ ಸಂಚಾರದ ದಿಕ್ಕು ಬದಲಾಯಿಸಲಾಗಿದೆ. ಕುರ್ಲ, ಸಿಯೋನ್, ಭಾಂಡುಪ್ ಮುಂತಾದೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಂಡಿವಲಿ ಉಪನಗರದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇಯಲ್ಲಿ ಭೂಕುಸಿತ ಉಂಟಾದ್ದರಿಂದ ದಕ್ಷಿಣ ಮುಂಬೈ ಕಡೆಗಿನ ವಾಹನ ಸಂಚಾರಕ್ಕೆ ಧಕ್ಕೆಯಾಗಿದೆ.

  ಕೊರೋನ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸೆಂಟ್ರಲ್ ಮುಂಬೈನ ನಾಯರ್ ಆಸ್ಪತ್ರೆಯ ಹೊರಭಾಗದಲ್ಲಿ ನೆರೆನೀರು ತುಂಬಿರುವುದರಿಂದ ಆಸ್ಪತ್ರೆಯ ಸಿಬಂದಿಗಳಿಗೆ ಕರ್ತವ್ಯ ನಿರ್ವಹಣೆಗೆ ಸಮಸ್ಯೆಯಾಗಿದೆ. ಭಾರೀ ಮಳೆಯಿಂದ ಉಪನಗರ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಆದರೆ ವಾಶಿ-ಪನ್ವೇಲ್, ಥಾಣೆ-ಕಲ್ಯಾಣ್ ಮುಂತಾದ ನಗರಗಳಿಗೆ ಸಂಚರಿಸುವ ಶಟ್ಲ್ ರೈಲು ಸೇವೆ ಮುಂದುವರಿದಿದೆ ಎಂದು ಕೇಂದ್ರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್ ಟ್ವೀಟ್ ಮಾಡಿದ್ದಾರೆ.

ದಾದರ್ ಮತ್ತು ಪ್ರಭಾದೇವಿ ನಡುವಿನ ರೈಲು ಮಾರ್ಗಗಳಲ್ಲಿ ನೀರಿನ ಮಟ್ಟ 200 ಮಿಮೀ ತಲುಪಿದೆ ಎಂದು ಪಶ್ಚಿಮ ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ದಾದರ್‌ನಲ್ಲಿ ರೈಲುಗಳ ಓಡಾಟ ನಿಲ್ಲಿಸಲಾಗಿದೆ. ಆದರೆ ಬಾಂದ್ರಾ ಮತ್ತು ದಹಾನು ರಸ್ತೆಯ ಮಾರ್ಗದಲ್ಲಿ ಉಪನಗರ ರೈಲು ಸಂಚಾರಕ್ಕೆ ಸಮಸ್ಯೆಯಾಗಿಲ್ಲ. ಮಾಟುಂಗ ಪೊಲೀಸ್ ಠಾಣೆಯೊಳಗೆ ನೀರು ನುಗ್ಗಿದೆ. ನೆರೆ ನೀರಿನಲ್ಲಿ ಸಿಲುಕಿದ ಹಲವು ವಾಹನಗಳ ಇಂಜಿನ್‌ಗೆ ನೀರು ನುಗ್ಗಿದ ಕಾರಣ ರಸ್ತೆಯಲ್ಲೇ ಕೆಟ್ಟು ನಿಂತಿವೆ. ಹಲವೆಡೆ ಮರಗಳು ಉರುಳಿದ್ದು ಅಂಧೇರಿ-ಎಸ್‌ಇಇಪಿಝೆಡ್ ರಸ್ತೆಯಲ್ಲಿ ಭಾರೀ ಮರ ಉರುಳಿಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಜನರು ಮನೆಯೊಳಗೇ ಇರುವಂತೆ ಬಿಎಂಸಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

 ಸಿಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಬಾಂಬೆ ಹೈಕೋರ್ಟ್, ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವ ನ್ಯಾಯಾಲಯ ಕಲಾಪವನ್ನು ಮಂಗಳವಾರ ರದ್ದುಗೊಳಿಸಿತ್ತು. ಭಾರೀ ಮಳೆಯ ಕಾರಣ ಮುಂಬೈ ನಗರ ಹಾಗೂ ಉಪನಗರದ ಸರಕಾರಿ ಕಚೇರಿಗಳಿಗೆ ಮಹಾರಾಷ್ಟ್ರ ಸರಕಾರ ಮಂಗಳವಾರ ರಜೆ ಘೋಷಿಸಿತ್ತು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News