ಫೇಸ್ ಬುಕ್ ನಲ್ಲಿ ಜಗಳ: ಯುವಕನನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ

Update: 2020-08-05 16:04 GMT

ಚಂಡಿಗಢ, ಆ. 5: ಫೇಸ್‌ಬುಕ್‌ನಲ್ಲಿ ವಾಗ್ವಾದ ನಡೆದ ಬಳಿಕ ಸೇನೆಯ ಮಾಜಿ ಯೋಧನೋರ್ವ 26 ವರ್ಷದ ಯುವಕನನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.

ತರನ್ ತರನ್ ಜಿಲ್ಲೆಯ ಕಿಲ್ಲಾ ಕಾವಿ ಸಂಟೋಕ್ ಸಿಂಗ್ ಗ್ರಾಮದಲ್ಲಿ ಮಾಜಿ ಯೋಧ ಜಸ್ಬೀರ್ ಸಿಂಗ್ ರೈಫಲ್‌ ನಿಂದ ಗುಂಡು ಹಾರಿಸಿ ಸುಖ್‌ಚೈನ್ ಸಿಂಗ್‌ನನ್ನು ಹತ್ಯೆಗೈದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುಖ್‌ಚೈನ್ ಸಿಂಗ್ ಕುಟುಂಬ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಜಸ್ಪೀರ್ ಸಿಂಗ್ ಫೇಸ್‌ಬುಕ್‌ನಲ್ಲಿ ಮತ್ತೆ ಮತ್ತೆ ಕಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದ. ಸುಖ್‌ಚೈನ್ ಸಿಂಗ್ ಈ ಆರೋಪವನ್ನು ನಿರಾಕರಿಸಿದ್ದ ಹಾಗೂ ಇಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕದಂತೆ ಜಸ್ಪೀರ್ ಸಿಂಗ್‌ನಲ್ಲಿ ವಿನಂತಿಸಿದ್ದ. ಈ ವಿಷಯದ ಕುರಿತು ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಮಂಗಳವಾರ ಜಸ್ಬೀರ್ ಸಿಂಗ್ ಸುಖ್‌ಚೈನ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡಿದ್ದ ಸುಖ್‌ಚೈನ್ ಸಿಂಗ್‌ರನ್ನು ಕೂಡಲೇ ತರನ್‌ತರನ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಸ್ಬೀರ್ ಸಿಂಗ್ ತನ್ನ ರೈಫಲ್‌ನೊಂದಿಗೆ ಮನೆಯ ಟೆರೇಸ್‌ನಲ್ಲಿ ನಿಂತಿರುವುದು ಹಾಗೂ ಗುಂಡು ಹಾರಿಸಿರುವುದು ಸುಖ್‌ಚೈನ್ ಮಾಡಿದ ವೀಡಿಯೊದಲ್ಲಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಜಸ್ಬೀರ್ ಸಿಂಗ್‌ನ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News