75ರ ವೃದ್ಧೆಯ ಮೇಲೆ ಅತ್ಯಾಚಾರ

Update: 2020-08-06 04:17 GMT

ಎರ್ನಾಕುಲಂ, ಆ.6: 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ಪೈಶಾಚಿಕ ಕೃತ್ಯ ಗ್ರಾಮೀಣ ಎರ್ನಾಕುಲಂನಲ್ಲಿ ರವಿವಾರ ನಡೆದಿದೆ. ಸಂತ್ರಸ್ತೆ ವೃದ್ಧೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಚಿಕಿತ್ಸೆ ನೀಡುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು ಹೇಳಿದ್ದಾರೆ.

ಮಹಿಳೆಯ ಆರೋಗ್ಯಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ದೇಹಸ್ಥಿತಿ ಸಹಜತೆಯತ್ತ ಮರಳುತ್ತಿದೆ. ಅವರ ಮಾನಸಿಕ ಸ್ಥಿತಿಯಲ್ಲೂ ಸುಧಾರಣೆ ಕಂಡುಬಂದಿದೆ ಎಂದು ಆಸ್ಪತ್ರೆಯ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು 66 ವರ್ಷದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನ ಮನೆಯಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ.

ಒಬ್ಬ ಆರೋಪಿ ಅತ್ಯಾಚಾರ ಎಸಗುತ್ತಿದ್ದಾಗ ಮತ್ತೊಬ್ಬ ಪಾನಮತ್ತ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ಕಾರ್ತಿಕ್ ವಿವರಿಸಿದ್ದಾರೆ. ಮಹಿಳೆಗೆ ಮಾನಸಿಕ ಹಾಗೂ ಸ್ಮರಣಶಕ್ತಿ ಸಮಸ್ಯೆ ಇತ್ತು. ಸಂತ್ರಸ್ತೆ ವೃದ್ಧೆಗೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೇಳಿದ್ದಾರೆ.
ಕೃತ್ಯದಿಂದ ಸಂತ್ರಸ್ತೆಯ ಗುಪ್ತಾಂಗಗಳಿಗೆ ಗಂಭೀರ ಗಾಯಗಳಾಗಿದ್ದು, ಎದೆ ಮತ್ತು ಹೊಟ್ಟೆಯ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ಒಳ ಅಂಗಾಂಗಗಳಿಗೂ ಗಾಯಗಳಾಗಿರುವುದು ವೈದ್ಯಕೀಯ ಸ್ಕ್ಯಾನಿಂಗ್‌ನಿಂದ ತಿಳಿದುಬಂದಿದೆ ಎಂದು ಆಸ್ಪತ್ರೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News