ರಾಜಸ್ತಾನ: ಕಾಂಗ್ರಸ್‌ನಲ್ಲಿ ಬಿಎಸ್ಪಿ ಶಾಸಕರ ವಿಲೀನಕ್ಕೆ ತಡೆಯಾಜ್ಞೆ ಕೋರಿದ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

Update: 2020-08-06 14:39 GMT

ಜೈಪುರ, ಆ.6: ರಾಜಸ್ತಾನದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಹುಜನ ಸಮಾಜವಾದಿ ಪಕ್ಷದ 6 ಮಾಜಿ ಶಾಸಕರು ವಿಲೀನ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ತಾನ ಹೈಕೋರ್ಟ್ ತಳ್ಳಿಹಾಕಿದ್ದು, ಈ ವಿಷಯದ ಬಗ್ಗೆ ಏಕಸದಸ್ಯ ಪೀಠ ಗಮನ ಹರಿಸಲಿದೆ ಎಂದು ತಿಳಿಸಿದೆ.

ಇದರೊಂದಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತುಸು ನಿರಾಳರಾಗಿದ್ದಾರೆ. ಹೈಕೋರ್ಟ್‌ನ ಏಕಸದಸ್ಯ ಪೀಠದ ವಿಚಾರಣೆ ಮುಗಿಯುವವರೆಗೆ ಈ ಆರು ಶಾಸಕರು ಸದನದ ಕಲಾಪದಲ್ಲಿ ಭಾಗವಹಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಏಕಸದಸ್ಯ ಪೀಠ ಆಗಸ್ಟ್ 11ರಂದು ತೀರ್ಪು ನೀಡುವ ನಿರೀಕ್ಷೆಯಿದ್ದು, ಈ ತೀರ್ಪಿನ ಮೇಲೆ ಗೆಹ್ಲೋಟ್ ಸರಕಾರದ ಭವಿಷ್ಯ ನಿಂತಿದೆ. ಬಹುಜನ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಆರು ಶಾಸಕರು 2019ರಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗಲು ಸಲ್ಲಿಸಿದ್ದ ಕೋರಿಕೆಯನ್ನು ಸ್ಪೀಕರ್ ಮಾನ್ಯ ಮಾಡಿದ್ದರು. ಇದರೊಂದಿಗೆ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿತ್ತು. ಈಗ ಸಚಿನ್ ಪೈಲಟ್ ನೇತೃತ್ವದಲ್ಲಿ 17 ಸದಸ್ಯರು ಬಂಡಾಯವೆದ್ದಿರುವುದರಿಂದ 200 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಗೆಹ್ಲೋಟ್ ಸರಕಾರದ ಬಲ ಕುಸಿದಿದೆ.

ಬಹುಮತ ಸಾಬೀತಿಗೆ 101 ಶಾಸಕರ ಬೆಂಬಲ ಬೇಕಿದ್ದು ತಮಗೆ 102 ಶಾಸಕರ ಬೆಂಬಲವಿದೆ ಎಂದು ಗೆಹ್ಲೋಟ್ ಹೇಳುತ್ತಿದ್ದಾರೆ. ಇದರಲ್ಲಿ ಬಿಎಸ್ಪಿಯ 6 ಶಾಸಕರ ವಿಲೀನತೆಯನ್ನು ನ್ಯಾಯಾಲಯ ಮಾನ್ಯ ಮಾಡದಿದ್ದರೆ ಗೆಹ್ಲೋಟ್ ಬೆಂಬಲಿಗರ ಸಂಖ್ಯೆ 96ಕ್ಕೆ ಇಳಿಯುತ್ತದೆ. ಬಿಜೆಪಿ 77 ಶಾಸಕರನ್ನು ಹೊಂದಿದ್ದರೆ, ಸಚಿನ್ ಪೈಲಟ್ ಬಣ ಹಾಗೂ ಪಕೆ್ಷೀತರ ಶಾಸಕರ ಸಂಖ್ಯೆ 20 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News