20 ಲಕ್ಷ ದಾಟಿದ ಕೊರೋನ ಕೇಸ್: ತನ್ನ ಊಹೆ ಸರಿಯಾಗಿದೆ ಎಂದ ರಾಹುಲ್ ಗಾಂಧಿ

Update: 2020-08-07 09:51 GMT

ಹೊಸದಿಲ್ಲಿ, ಆ.7: ಭಾರತದಲ್ಲಿ ಕೊರೋನ ವೈರಸ್ ಪ್ರಕರಣ ಸಂಖ್ಯೆ 20 ಲಕ್ಷ ಗಡಿ ದಾಟಿದ ಬೆನ್ನಿಗೇ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತನ್ನ ಟೈಮ್‌ಲೈನ್‌ನಲ್ಲಿ ಹಳೆ ಟ್ವೀಟ್‌ನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 10ರೊಳಗೆ ಭಾರತದಲ್ಲಿ ಕೊರೋನ ಕೇಸ್‌ಗಳು 20 ಲಕ್ಷ ದಾಟಲಿದೆ ಎಂದಿರುವ ತನ್ನ ಊಹೆ ಸರಿಯಾಗಿದೆ ಎಂದು ಹೇಳಿದ್ದಾರೆ.

ಕೊರೋನ ವೈರಸ್ ಪ್ರಕರಣವನ್ನು ನಿಭಾಯಿಸುತ್ತಿರುವ ಸರಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ 50ರ ಹರೆಯದ ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್, "ಬೀಸ್ ಲಾಕ್ ಕಾ ಆಂಕ್ರಾ ಪಾರ್... ಗಯಾಬ್ ಹೈ ಮೋದಿ ಸರ್ಕಾರ್(20 ಲಕ್ಷ ಗಡಿ ದಾಟಿದೆ, ಮೋದಿ ಸರಕಾರ ಕಾಣೆಯಾಗಿದೆ)''ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಜುಲೈ 17ರಂದು ಭಾರತದಲ್ಲಿ ಕೋವಿಡ್-19 ಪ್ರಕರಣವು 10 ಲಕ್ಷ ದಾಟಿದಾಗ ಪ್ರತಿಕ್ರಿಯಿಸಿದ್ದ ಕೇರಳದ ವಯನಾಡ್ ಸಂಸದ ರಾಹುಲ್, ಆಗಸ್ಟ್ 10ರ ಒಳಗೆ ಭಾರತದಲ್ಲಿ ಇನ್ನೂ 10 ಲಕ್ಷ ಕೇಸ್‌ಗಳು ಪತ್ತೆಯಾಗಲಿವೆ ಎಂದು ಹೇಳಿದ್ದರು.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಾಹುಲ್, ತನ್ನ ಹಿಂದಿನ ಟ್ವೀಟ್ ಸರಿಯಾಗಿದೆ ಎಂದು ನೆನಪಿಸಿದರು.

"ಕೋವಿಡ್-19 ಕೇಸ್‌ಗಳು 10 ಲಕ್ಷ ದಾಟಿದೆ. ಆಗಸ್ಟ್ 10ರ ವೇಳೆಗೆ ನಾವು 20 ಲಕ್ಷ ಗಡಿ ದಾಟಲಿದ್ದೇವೆ. ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಲು ಸರಕಾರ ದಿಟ್ಟ ಹೆಜ್ಜೆಗಳನ್ನು ಇಡಬೇಕು'' ಎಂದು ಜುಲೈ 17ರಂದು ರಾಹುಲ್ ಟ್ವೀಟ್ ಮಾಡಿದ್ದರು.

ಗುರುವಾರ ಸಂಜೆ ಭಾರತದಲ್ಲಿ ಕೊರೋನ ಕೇಸ್ 20 ಲಕ್ಷ ಗಡಿ ದಾಟಿದೆ. ಭಾರತ 10 ಲಕ್ಷ ಕೇಸ್‌ಗಳನ್ನು ದಾಖಲಿಸಿದ ಕೇವಲ 20 ದಿನಗಳಲ್ಲಿ 20 ಲಕ್ಷ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News