ಕೋವಿಡ್-19ರ ನಂತರ ಈಗ ಚೀನಾದಲ್ಲಿ ಉಣ್ಣಿಯಿಂದ ಹರಡುವ ಹೊಸ ವೈರಸ್ ಸೋಂಕು

Update: 2020-08-07 12:56 GMT
ಸಾಂದರ್ಭಿಕ ಚಿತ್ರ

ಬೀಜಿಂಗ್: ಜಗತ್ತಿನಾದ್ಯಂತ ದೇಶಗಳು ಕೊರೋನವೈರಸ್ ಸೋಂಕು ತಡೆಗಟ್ಟಲು ಹೆಣಗಾಡುತ್ತಿರುವ ನಡುವೆಯೇ, ಚೀನಾದಲ್ಲಿ ಇನ್ನೊಂದು ಹೊಸ ವೈರಸ್ ಸೃಷ್ಟಿಯಾಗಿದ್ದು, ಕಂಟಕ ಸೃಷ್ಟಿಸುವ ಸುಳಿವನ್ನು ನೀಡಿದೆ. ಉಣ್ಣಿ (ಟಿಕ್) ಎಂಬ ಸಣ್ಣ 8 ಕಾಲುಗಳನ್ನು ಹೊಂದಿರುವ ಪರೋಪಜೀವಿಗಳ ಮೂಲಕ ಹರಡುವ ಈ ವೈರಸ್ ಈಗಾಗಲೇ ಚೀನಾದಲ್ಲಿ ಏಳು ಜನರ ಬಲಿ ಪಡೆದಿದೆ ಹಾಗೂ 60ಕ್ಕೂ ಹೆಚ್ಚು ಮಂದಿ ಈ ಹೊಸ ವೈರಲ್ ಸೋಂಕಿಗೆ ಒಳಗಾಗಿದ್ದಾರೆ.

ಉಣ್ಣಿಗಳು ಸಾಮಾನ್ಯವಾಗಿ ಪೊದೆಗಳು ಮತ್ತು ಹುಲ್ಲುಗಳಲ್ಲಿ ಕಂಡುಬರುತ್ತವೆ. ಅವುಗಳು ಸಾಮಾನ್ಯವಾಗಿ ಸಸ್ತನಿಗಳು ಮತ್ತು ಹಕ್ಕಿಗಳ ರಕ್ತ ಕುಡಿದು ಬದುಕುತ್ತವೆ. ಕೆಲವು ಸಂದರ್ಭಗಳಲ್ಲಿ ಸರೀಸೃಪಗಳು ಮತ್ತು ಉಭಯವಾಸಿಗಳ ಮೈಮೇಲೂ ಕಂಡುಬರುತ್ತವೆ.  ಉಣ್ಣಿಗಳು ಸುಮಾರು 83 ವಿಧದ ವೈರಸ್ ಗಳ ವಾಹಕವಾಗಿದೆ. ಉಣ್ಣಿಯಿಂದ ಹರಡುವ ಈ ವೈರಸ್ ನಿಂದಾಗಿ ಉಂಟಾಗುವ ಕಾಯಿಲೆಯನ್ನು ಸೀವಿಯರ್ ಫೀವರ್ ವಿದ್ ತ್ರೊಂಬೊಸೈಟೊಪೀನಿಯಾ ಸಿಂಡ್ರೋಮ್ (ಎಸ್ಎಫ್ಟಿಎಸ್) ಎಂದು ಹೆಸರಿಸಲಾಗಿದೆ ಹಾಗೂ ಈ ವೈರಸನ್ನು ನೋವೆಲ್ ಬುನ್ಯಾವೈರಸ್ ಎಂದು ಕರೆಯಲಾಗಿದೆ.

ಇದೊಂದು ನೈಸರ್ಗಿಕವಾಗಿ ಕಾಣಿಸಿಕೊಳ್ಳುವ  ಹೊಸ ಸಾಂಕ್ರಾಮಿಕ ರೋಗವಾಗಿದೆ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. ಆರಂಭದಲ್ಲಿ ಈ ಕಾಯಿಲೆಯಿಂದಾಗಿ ಸಂಭವಿಸಿದ ಸಾವುಗಳು ಡೆಂಗಿ ಜ್ವರದಿಂದ ಸಂಭವಿಸಿವೆ ಎಂದು ತಿಳಿಯಲಾಗಿತ್ತಾದರೂ, ನಂತರ ಇದು ಬುನ್ಯಾವೈರಸ್ನಿಂದಾಗಿ ಕಾಣಿಸಿಕೊಳ್ಳುವ ಎಸ್ಎಫ್ಟಿಎಸ್ ಕಾಯಿಲೆಯಿಂದಾಗಿ ಸಂಭವಿಸಿವೆ ಎಂಬ ನಿರ್ಧಾರಕ್ಕೆ ಚೀನಾದ ಆರೋಗ್ಯ ಪ್ರಾಧಿಕಾರಗಳು ಬಂದಿವೆ.

ಈ ರೋಗವು ಉಣ್ಣಿಗಳ ಕಡಿತದಿಂದ ಮಾನವರಿಗೆ ಹರಡುತ್ತದೆ. ಆದರೆ, ಮನುಷ್ಯರಿಂದ ಮನುಷ್ಯರಿಗೂ ಹರಡುವ ಸಾಧ್ಯತೆಯೂ ಇದೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರಗಳು ಎಚ್ಚರಿಸಿವೆ.

ಜ್ವರ, ಚಳಿ, ಮೈ-ಕೈ ನೋವು ಹಾಗೂ ಮೈಮೇಲೆ ಕೆಂಪು ಬೊಕ್ಕೆಗಳು ಕಾಣಿಸಿಕೊಳ್ಳುವುದು ಈ ರೋಗದ ಕೆಲವು ಲಕ್ಷಣಗಳು ಎಂದು ತಜ್ಞರು ಹೇಳುತ್ತಾರೆ. ಈ ಕಾಯಿಲೆಯನ್ನು ತಡೆಗಟ್ಟಲು ಸದ್ಯ ಯಾವುದೇ ಲಸಿಕೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News