ಆಧಾರ್‌ನ ಹೊಸ ನಿಯಮ ಸುಪ್ರೀಂ ಸೂಚನೆ ಮೀರುವ ಪ್ರಯತ್ನ: ಸಾಮಾಜಿಕ ಕಾರ್ಯಕರ್ತರ ಟ್ರಸ್ಟ್ ಆತಂಕ

Update: 2020-08-07 17:05 GMT

ಹೊಸದಿಲ್ಲಿ, ಆ.7: ಆಧಾರ್ ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಕಟಿಸಿರುವ ಹೊಸ ನಿಯಮಗಳು, ಆಧಾರ್ ಗುರುತು ಚೀಟಿಯನ್ನು ಸರಕಾರದ ಸೌಲಭ್ಯ ಮತ್ತು ಪ್ರಯೋಜನ ಪಡೆಯಲು ಮಾತ್ರ ಪಡೆಯಬೇಕೆಂದು ಸುಪ್ರೀಂಕೋರ್ಟ್ ರೂಪಿಸಿರುವ 'ಕೆಂಪು ಪಟ್ಟಿ'ಯನ್ನು ಮೀರುವ ಪ್ರಯತ್ನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರ ತಂಡ ಆತಂಕ ವ್ಯಕ್ತಪಡಿಸಿದೆ.

'ಉತ್ತಮ ಆಡಳಿತದ ಹಿತದೃಷ್ಟಿಯಿಂದ, ಸರಕಾರಿ ನಿಧಿಯ ಸೋರಿಕೆಯನ್ನು ತಡೆಗಟ್ಟಲು, ಪ್ರಜೆಗಳ ಜೀವನ ಸೌಕರ್ಯಕ್ಕೆ ಉತ್ತೇಜನ ನೀಡಲು, ಮತ್ತು ಅವರಿಗೆ ಸರಕಾರಿ ಸೇವೆಗಳ ಉತ್ತಮ ಲಭ್ಯತೆಯ ದೃಷ್ಟಿಯಿಂದ ಸಂಸ್ಥೆಗಳು ಆಧಾರ್ ದೃಢೀಕರಣ ನಡೆಸಲು ಅವಕಾಶ ನೀಡಲಾಗಿದೆ' ಎಂದು ಸರಕಾರದ ಹೊಸ ನಿಯಮದಲ್ಲಿ ಪ್ರತಿಪಾದಿಸಲಾಗಿದೆ.

ಆದರೆ ಆಧಾರ್ ದೃಢೀಕರಣಕ್ಕೆ ಸರಕಾರ ನೀಡಿರುವ ಸಮರ್ಥನೆ ' ಹೊಸ ಬಾಟಲಿಯಲ್ಲಿ ಹಳೆಯ ಮದ್ಯವಾಗಿದೆ' ಎಂದು ರಿಥಿಂಕ್ ಆಧಾರ್ ಮತ್ತು ದಿ ಆರ್ಟಿಕಲ್ 21 ಟ್ರಸ್ಟ್ ಶುಕ್ರವಾರ ಹೇಳಿದೆ. ಉತ್ತಮ ಆಡಳಿತಕ್ಕೆ ಈ ಹೊಸ ನಿಯಮ ಪೂರಕ ಎಂದು ಸರಕಾರ ಹೇಳುತ್ತಿರುವುದು ವಿಪರ್ಯಾಸವಾಗಿದೆ. ಈ ಪರಿಕಲ್ಪನೆಗೆ ಆಧಾರವಾಗಿರುವ ಎಲ್ಲಾ ಮಾನದಂಡಗಳನ್ನೂ ಸಂಪೂರ್ಣ ಕಡೆಗಣಿಸಿ ಆಧಾರ್ ಯೋಜನೆಯನ್ನು ರೂಪಿಸಲಾಗಿದೆ . ಎಲ್ಲಾ ಸರಕಾರಿ ಸೇವೆಗಳೂ 'ಉತ್ತಮ ಆಡಳಿತದ' ವ್ಯಾಪಿಗೆ ಒಳಪಡುವುದರಿಂದ ಸರಕಾರದ ಸಮರ್ಥನೆ ಅರ್ಥಹೀನ ಎಂದು ಸಂಸ್ಥೆಯ ಮಾನಸಿ ವರ್ಮ ಮತ್ತು ರಿಯಾ ಸಿಂಗ್ ಸಾಹ್ನೆ ಹೇಳಿದ್ದಾರೆ.

ಡಿಜಿಟಲ್ ವೇದಿಕೆಯಲ್ಲಿ ಆಧಾರ್ ದೃಢೀಕರಣ ಪ್ರಕ್ರಿಯೆ ಸ್ವಪ್ರೇರಿತವಾಗಿರುತ್ತದೆ ಎಂದು ಸರಕಾರದ ಹೊಸ ನಿಯಮದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾನಸಿ ವರ್ಮ, ಸರಕಾರದ ಸಾಮಾಜಿಕ ಸೌಲಭ್ಯ ಯೋಜನೆಗಳ ಪ್ರಯೋಜನದ ದುರುಪಯೋಗವಾಗುತ್ತಿದೆ ಎಂಬ ಸರಕಾರದ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಜನಕಲ್ಯಾಣ ಯೋಜನೆಗಳಲ್ಲಿ ಯಾವ ರೀತಿ ಸೋರಿಕೆಯಾಗುತ್ತಿದೆ ಎಂಬ ದೋಷಪೂರಿತ ಕಲ್ಪನೆಯನ್ನು ಆಧಾರ್ ಯೋಜನೆ ಹೊಂದಿದೆ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವವರು ಸಂಭಾವ್ಯ ವಂಚಕರು ಎಂದು ಪರಿಗಣಿಸಿದೆ ಎಂದು ಹೇಳಿದ್ದಾರೆ.

ಒಪ್ಪಿಗೆ ಮತ್ತು ಸ್ವಯಂಪ್ರೇರಿತ ಕ್ರಿಯೆಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಅಸಾಂವಿಧಾನಿಕ ಆಧಾರ್ ಯೋಜನೆಗೆ ಸಂವಿಧಾನದ ಮಾನ್ಯತೆ ಲಭಿಸದು. ಆಧಾರ್‌ಗೆ ಯಾವುದೇ ಇತರ ಕಾರ್ಡ್‌ಗಳ ಜೋಡಣೆಯು ದೇಶದ ಜನರ ಸುರಕ್ಷತೆ, ಭದ್ರತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ರಿಥಿಂಕ್ ಆಧಾರ್ ಮತ್ತು ಆರ್ಟಿಕಲ್ 21 ಟ್ರಸ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News