ಐಎಎಫ್ ತರಬೇತಿ ವಿಮಾನಗಳ ಖರೀದಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿ ಹಲವೆಡೆ ಈ.ಡಿ.ದಾಳಿ

Update: 2020-08-07 17:40 GMT

ಹೊಸದಿಲ್ಲಿ, ಆ.7: ಭಾರತೀಯ ವಾಯುಪಡೆ (ಐಎಎಫ್)ಗಾಗಿ 2009ರಲ್ಲಿ 75 ಪಿಲಾಟಸ್ ತರಬೇತಿ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಈ.ಡಿ)ವು ಶುಕ್ರವಾರ ದಿಲ್ಲಿಯ ಒಂದು ಡಝನ್ ಹಾಗೂ ಗುರುಗ್ರಾಮ ಮತ್ತು ಸೂರತ್‌ಗಳ ತಲಾ ಒಂದು ಸ್ಥಳ ಸೇರಿದಂತೆ ಕನಿಷ್ಠ 14 ಕಡೆಗಳಲ್ಲಿ ದಾಳಿಗಳನ್ನು ನಡೆಸಿದೆ.

2,895 ಕೋ.ರೂ.ಗಳ ಪಿಲಾಟಸ್ ಖರೀದಿ ಒಪ್ಪಂದದಲ್ಲಿ ಸಿಬಿಐ ಕಳೆದ ವರ್ಷದ ಜೂನ್‌ನಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ. ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರಗಳ ದಲ್ಲಾಳಿ ಸಂಜಯ ಭಂಡಾರಿ,ಐಎಎಫ್,ರಕ್ಷಣಾ ಸಚಿವಾಲಯ ಮತ್ತು ಸ್ವಿಟ್ಝರ್‌ಲ್ಯಾಂಡ್‌ನ ಪಿಲಾಟಸ್ ಏರ್‌ಕ್ರಾಫ್ಟ್ ಲಿ.ನ ಅಪರಿಚಿತ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಕಮಿಷನ್ ಪಾವತಿಯ ಆರೋಪಗಳು ಕೇಳಿ ಬಂದನಂತರ ಜುಲೈನಲ್ಲಿ ರಕ್ಷಣಾ ಸಚಿವಾಲಯವು ಒಂದು ವರ್ಷದ ಮಟ್ಟಿಗೆ ಪಿಲಾಟಸ್‌ನೊಂದಿಗಿನ ಎಲ್ಲ ವಾಣಿಜ್ಯ ಒಪ್ಪಂದಗಳನ್ನು ಅಮಾನತುಗೊಳಿಸಿತ್ತು.

ಬ್ರಿಟನ್‌ನಲ್ಲಿ ಇದ್ದಾನೆಂದು ಹೇಳಲಾಗಿರುವ ಬಂಢಾರಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಯುತ್ತಿದ್ದು, ಈ.ಡಿ. ಆತನ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಆರಂಭಿಸಲು ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಭ್ರಷ್ಟಾಚಾರ ಮತ್ತು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಅಘೋಷಿತ ಆಸ್ತಿಗಳನ್ನು ಹೊಂದಿರುವ ಆರೋಪದಲ್ಲಿಯೂ ಭಂಡಾರಿ ಈ.ಡಿ. ಮತ್ತು ಸಿಬಿಐನಿಂದ ಎರಡು ಪ್ರತ್ಯೇಕ ತನಿಖೆಗಳನ್ನು ಎದುರಿಸುತ್ತಿದ್ದಾನೆ. ಜೂನ್ 2010ರಲ್ಲಿ ಪಿಲಾಟಸ್ ಕಂಪನಿಯು ರಕ್ಷಣಾ ಖರೀದಿ ವಿಧಿವಿಧಾನಗಳನ್ನು ಉಲ್ಲಂಘಿಸಿ ಐಎಎಫ್‌ಗೆ 75 ತರಬೇತಿ ವಿಮಾನಗಳ ಪೂರೈಕೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಲು ಭಂಡಾರಿ ಮತ್ತು ಆಫ್‌ಸೆಟ್ ಇಂಡಿಯಾ ಸೊಲ್ಯೂಷನ್ಸ್ ಪ್ರೈ.ಲಿ.ನ ಓರ್ವ ನಿರ್ದೇಶಕನೊಂದಿಗೆ ಸೇರಿಕೊಂಡು ಸಂಚು ರೂಪಿಸಿತ್ತು ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News