ಸಹ ಕಾರ್ಯಕರ್ತನ ಹತ್ಯೆ ಪ್ರಕರಣ: 9 ಮಂದಿ ಆರೆಸ್ಸೆಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Update: 2020-08-08 03:45 GMT
ಕಡವೂರ್ ಜಯನ್

ಕೊಲ್ಲಂ, ಆ.8: ಎಂಟು ವರ್ಷಗಳ ಹಿಂದೆ ಸಹ ಕಾರ್ಯಕರ್ತ ಕಡವೂರ್ ಜಯನ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಲ್ಲಿ ಒಂಬತ್ತು ಮಂದಿ ಆರೆಸ್ಸೆಸ್ ಕಾರ್ಯಕರ್ತರಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳೀಗೆ ಕೋವಿಡ್-19 ಸೋಂಕು ತಗಲಿದ ಹಿನ್ನೆಲೆಯಲ್ಲಿ ಕೊಲ್ಲಂ ಪ್ರಧಾನ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಸಿ. ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಈ ತೀರ್ಪು ನೀಡಿದ್ದಾರೆ.

ಆರೋಪಿಗಳಿಗೆ ತಲಾ 71,500 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ನಾಲ್ಕು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ದಂಡ ಮೊತ್ತದಿಂದ 2 ಲಕ್ಷ ರೂಪಾಯಿಗಳನ್ನು ಜಯನ್ ಅವರ ತಾಯಿಗೆ, 25 ಸಾವಿರ ರೂಪಾಯಿಗಳನ್ನು ಜಯನ್ ಜತೆ ದಾಳಿಗೆ ಒಳಗಾದ ರಘುನಾಥ ಪಿಳ್ಳೈಗೆ ನೀಡುವಂತೆ ಸೂಚಿಸಲಾಗಿದೆ.

ವಿನೋದ್, ಗೋಪಕುಮಾರ್, ಸುಬ್ರಹ್ಮಣ್ಯನ್, ಪ್ರಿಯರಾಜ್, ಪ್ರಣವ್, ಅರುಣ್, ರಜನೀಶ್, ದಿನರಾಜ್ ಮತ್ತು ಶಿಜು ಶಿಕ್ಷೆಗೆ ಒಳಗಾದ ಆರೋಪಿಗಳು. ಕಯಮ್‌ಕುಲಂ ಕೋವಿಡ್ ಫಸ್ಟ್‌ಲೈನ್ ಚಿಕಿತ್ಸಾ ಕೇಂದ್ರದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

2012ರ ಜನವರಿ 7ರಂದು ಜಯನ್ ಅವರನ್ನು ಕಡವೂರು ಜಂಕ್ಷನ್‌ನಲ್ಲಿರುವ ಅವರ ಮನೆ ಬಳಿ ಇರಿದು ಸಾಯಿಸಲಾಗಿತ್ತು. ಅವರ ಭಾವ ರಘುನಾಥ ಪಿಳ್ಳೈ ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದರು. ಜಯನ್ ದೇಹದಲ್ಲಿ 50 ಗಾಯಗಳಿದ್ದವು. ಅಭಿಯೋಜಕರು 23 ಸಾಕ್ಷಿ, 75 ಪುರಾವೆ ಮತ್ತು 38 ಭೌತಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News