‘ಕೋಯಿಕ್ಕೋಡ್ ವಿಮಾನ ದುರಂತ ಅಪಘಾತವಲ್ಲ, ಹತ್ಯೆ’ ಎಂದ ವಾಯುಯಾನ ಕ್ಷೇತ್ರದ ತಜ್ಞ

Update: 2020-08-08 12:10 GMT

ಹೊಸದಿಲ್ಲಿ: ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಶುಕ್ರವಾರ ಕೋಯಿಕ್ಕೋಡ್ ‍ನಲ್ಲಿ ನಡೆದ ವಿಮಾನ ದುರಂತ ಮುಂದೆ ಪಾಟ್ನಾ ಹಾಗೂ ಜಮ್ಮು ವಿಮಾನ ನಿಲ್ದಾಣಗಳಲ್ಲೂ ನಡೆಯಬಹುದು ಎಂದು ವಾಯುಯಾನ ಕ್ಷೇತ್ರದ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಎಚ್ಚರಿಸಿದ್ದಾರೆ.

hindustantimes.com ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಂಗನಾಥನ್ ಅವರು, ನಾಗರಿಕ ವಿಮಾನಯಾನ ಸಚಿವಾಲಯದ  ಸುರಕ್ಷತಾ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಕೋಯಿಕ್ಕೋಡ್ ವಿಮಾನ ನಿಲ್ದಾಣ ಲ್ಯಾಂಡಿಂಗ್‍ ಗೆ ಸುರಕ್ಷಿತವಲ್ಲ ಎಂದು ತಾವು ಒಂಬತ್ತು ವರ್ಷಗಳ ಹಿಂದೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದಾಗಿ ಅವರು ಹೇಳುತ್ತಾರೆ.

“ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಯಿತು, ನನ್ನ ಅಭಿಪ್ರಾಯದಲ್ಲಿ ಇದು ಒಂದು ಅಪಘಾತವಲ್ಲ ಬದಲು ಹತ್ಯೆ'' ಎಂದು ಹೇಳುವ ರಘುನಾಥನ್ ಈ ದುರಂತವನ್ನು ತಪ್ಪಿಸಬಹುದಾಗಿತ್ತು ಎನ್ನುತ್ತಾರೆ.

ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿರುವಂತಹ ಟೇಬಲ್ ಟಾಪ್ ರನ್-ವೇಗಳಲ್ಲಿ  ಹೆಚ್ಚು ಜಾಗವಿಲ್ಲದೇ ಇರುವುದರಿಂದ ಬಹಳಷ್ಟು ಸುರಕ್ಷತಾ ಕ್ರಮಗಳು ಅಗತ್ಯ ಎಂದು ಅವರು ಹೇಳುತ್ತಾರೆ.

“ರನ್-ವೇ ತುದಿಯಲ್ಲಿ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ 70 ಮೀಟರ್ ಆಳದ ಕಣಿವೆಯಿದೆ, ಮಂಗಳೂರಿನಲ್ಲಿ ಇದು 100 ಮೀಟರ್ ಆಳವಿದೆ. ಒಂದು ವೇಳೆ ರನ್-ವೇಯಿಂದ ವಿಮಾನ ಆಚೆ ಹೋದರೆ ದುರಂತ ತಪ್ಪಿಸುವ ಹಾಗಿಲ್ಲ. ಮುಂದೆ ಇಂತಹುದೇ ದುರ್ಘಟನೆಗಳು ಪಾಟ್ನಾ ಅಥವಾ ಜಮ್ಮು ವಿಮಾನ ನಿಲ್ದಾಣಗಳಲ್ಲೂ ನಡೆಯಬಹುದು ಎರಡೂ ವಿಮಾನ ನಿಲ್ದಾಣಗಳು ಅಪಾಯಕಾರಿ ಹಾಗೂ ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲ'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News