ಕೇರಳ ವಿಮಾನ ದುರಂತಕ್ಕೆ ಕಾರಣ ಇವುಗಳಾಗಿರುವ ಸಾಧ್ಯತೆ..!

Update: 2020-08-09 04:04 GMT

ಹೊಸದಿಲ್ಲಿ : ಕೇರಳ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ದುರಂತಕ್ಕೀಡಾದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ತೀವ್ರ ಗಾಳಿ ಹಾಗೂ ಮಳೆ ಕಾರಣದಿಂದ ರನ್‌ವೇ ಉದ್ದದಲ್ಲಿ ಒಂದು ಕಿಲೋಮೀಟರ್ ಮುಂದೆ ಇಳಿದಿತ್ತು ಎಂದು ತಿಳಿದುಬಂದಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮೂಲಗಳ ಪ್ರಕಾರ, ರನ್‌ವೇಯ ಉಳಿದ ಉದ್ದ ಸುರಕ್ಷಿತವಾಗಿ ವಿಮಾನ ನಿಲುಗಡೆಗೆ ಸಾಕಾಗುತ್ತದೆಯೇ ಎಂಬುದನ್ನು ತಿಳಿದುಕೊಂಡ ಬಳಿಕ ಅಪಘಾತಕ್ಕೆ ಪ್ರಮುಖ ಕಾರಣ ಏನು ಎನ್ನುವ ನಿರ್ಧಾರಕ್ಕೆ ಬರಬೇಕಾಗುತ್ತದೆ ರನ್‌ವೇ ಮೇಲ್ಮೈ ಒದ್ದೆಯಾಗಿತ್ತು. ಇದು ವಿಮಾನ ಭೂ ಸ್ಪರ್ಶ ಮಾಡಿದ ಮೇಲೆ ಬ್ರೇಕಿಂಗ್ ಕ್ಷಮತೆಯ ಮೇಲೆ ಪರಿಣಾಮ ಬೀರಿರುವ ಅಂಶಗಳಲ್ಲೊಂದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಅಗತ್ಯ ಪ್ರಮಾಣದಲ್ಲಿ ವಿಮಾನದ ವೇಗ ತಗ್ಗಿಸಲು ಸಾಧ್ಯವಾಗದ ಕಾರಣ ಬೋಯಿಂಗ್ 737 ರನ್‌ವೇ ಅಂಚಿಗೆ ಬಂದು ನಿಂತು 35 ಅಡಿ ಆಳದ ಕಂದಕಕ್ಕೆ ಬಿತ್ತು. ಬಳಿಕ ವಿಮಾನ ನಿಲ್ದಾಣದ ಹೊರ ಆವರಣ ಗೋಡೆಗೆ ಢಿಕ್ಕಿ ಹೊಡೆದು ಸಂಪೂರ್ಣ ನಿಲುಗಡೆಯಾಗಿದೆ. ವಿಮಾನ ಇಬ್ಭಾಗವಾಗಿದ್ದು, ವಿಮಾನದ ಮುಂಬದಿಯಲ್ಲಿದ್ದವರಲ್ಲಿ ಸಾವು ನೋವು ಅಧಿಕವಾಗಿದೆ. ವಿಮಾನದ ಇಬ್ಬರೂ ಪೈಲಟ್‌ಗಳು ಸಾವಿಗೀಡಾಗಿದ್ದಾರೆ.

ವಿಮಾನದ ಟ್ರ್ಯಾಕಿಂಗ್ ಆ್ಯಪ್ ಫ್ಲೈಟ್ ‌ರಾಡಾರ್ 24 ಬಿಡುಗಡೆ ಮಾಡಿರುವ ಆ್ಯನಿಮೇಟೆಡ್ ವಿಡಿಯೊ ಪ್ರಕಾರ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್-1344 ಮೊದಲ ಲ್ಯಾಂಡಿಂಗ್ ಪ್ರಯತ್ನದಲ್ಲಿ ವಿಫಲವಾಗಿದ್ದು, ಎರಡನೇ ಬಾರಿಗೆ ಹಾಗೂ ಅಂತಿಮವಾಗಿ ಭೂಮಿಯತ್ತ ತಲುಪುವಾಗ ವೇಗ ಅಧಿಕವಾಗಿದ್ದಿರಬಹುದು. ಟ್ರ್ಯಾಕರ್ ಪ್ರಕಾರ ವಿಮಾನ 450 ಅಡಿ ಎತ್ತರದಲ್ಲಿ ಸುಮಾರು 325 ಕಿಲೋಮೀಟರ್ ವೇಗದಲ್ಲಿತ್ತು ಎಂದು ಸುರಕ್ಷಾ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಹೇಳುತ್ತಾರೆ. ಈ ಸ್ಥಿತಿಯಲ್ಲಿ ಇದು ಅಪೇಕ್ಷಣೀಯ ವೇಗವಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News