72 ಲಕ್ಷ ರೂ. ಪಾವತಿಸಿ ನಕಲಿ ವೀಕ್ಷಕರಿಂದ ಕೋಟಿಗಟ್ಟಲೆ ವೀವ್ಸ್ ಪಡೆದ ಗಾಯಕ ಬಾದ್ ಶಾ: ಪೊಲೀಸರ ಆರೋಪ

Update: 2020-08-09 10:45 GMT

ಮುಂಬೈ: ತಮ್ಮ ಮ್ಯೂಸಿಕ್ ವಿಡಿಯೊಗಳನ್ನು ಭಾರೀ ಸಂಖ್ಯೆಯ ವೀಕ್ಷಕರು ನೋಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಸುವ ಸಲುವಾಗಿ ಹೆಚ್ಚುವರಿ ನಕಲಿ ವೀಕ್ಷಕರನ್ನು ಸೃಷ್ಟಿಸಲು 72 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿರುವ ಬಗ್ಗೆ ಗಾಯಕ ಬಾದ್ ಶಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವ ಬೀರುವ ಸಲುವಾಗಿ ನಕಲಿ ಫಾಲೋವರ್ ಗಳನ್ನು ಮತ್ತು ವೀಕ್ಷಕರನ್ನು ಮಾರಾಟ ಮಾಡುವ ಜಾಲದ ಸಂಬಂಧ ಈ ರ್ಯಾಪ್ ಗಾಯಕನನ್ನು ಮುಂಬೈ ಪೊಲೀಸರು ವಿಚಾರಣೆಗೆ ಗುರಿಪಡಿಸಿದಾಗ ಈ ಅಂಶ ಬಹಿರಂಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾದ್ ಶಾ ‘ನಾನು ಯಾವ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ.

ಮೊದಲ 24 ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಗರಿಷ್ಠ ಸಂಖ್ಯೆಯ ವೀಕ್ಷಣೆಯನ್ನು ದಾಖಲಿಸಿ ವಿಶ್ವದಾಖಲೆ ನಿರ್ಮಿಸುವ ದೃಷ್ಟಿಯಿಂದ 72 ಲಕ್ಷ ರೂಪಾಯಿಗಳಿಗೆ ಸುಮಾರು 7.2 ಕೋಟಿ ನಕಲಿ ವೀಕ್ಷಕರನ್ನು ತಾನು ಖರೀದಿಸಿದ್ದಾಗಿ ಬಾದ್‍ ಶಾ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

‘ಪಾಗಲ್ ಹೈ’ ಮ್ಯೂಸಿಕ್ ವಿಡಿಯೊ ಬಿಡುಗಡೆಯ ಮೊದಲ ದಿನವೇ 75 ದಶಲಕ್ಷ ವೀಕ್ಷಣೆಯನ್ನು ಕಂಡಿತ್ತು. ಇದು ಟೇಲರ್ ಸ್ವಿಫ್ಟ್ ಹಾಗೂ ಕೊರಿಯನ್ ಬಾಯ್ ಬ್ಯಾಂಡ್ ಬಿಟಿಎಸ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದೆ ಎಂದು ಬಾದ್‍ ಶಾ ಹೇಳಿಕೊಂಡಿದ್ದರು. ಆದರೆ ಗೂಗಲ್ ಇದನ್ನು ನಿರಾಕರಿಸಿತ್ತು.

ಮೊದಲ 24 ಗಂಟೆಯನ್ನು ಗರಿಷ್ಠ ವೀಕ್ಷಕರನ್ನು ದಾಖಲಿಸುವ ದೃಷ್ಟಿಯಿಂದ ಒಂದು ಕಂಪನಿಗೆ 72 ಲಕ್ಷ ರೂಪಾಯಿ ಪಾವತಿಸಿದ್ದನ್ನು ಈ ಗಾಯಕ ಒಪ್ಪಿಕೊಂಡಿದ್ದಾರೆ ಎಂದು ಡಿಸಿಪಿ ನಂದಕುಮಾರ್ ಠಾಕೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News