ರೆಹಾನಾ ಫಾತಿಮಾ ಎರ್ನಾಕುಲಂ ಪೊಲೀಸರಿಗೆ ಶರಣು

Update: 2020-08-09 14:45 GMT

ತಿರುವನಂತಪುರ, ಆ. 9: ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ರೆಹಾನಾ ಫಾತಿಮಾ ಸಲ್ಲಿಸಿದ ನಿರೀಕ್ಷಣಾ ಜಾಮೀನನನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಒಂದು ದಿನದ ಬಳಿಕ ರೆಹಾನಾ ಫಾತಿಮ ಶನಿವಾರ ಎರ್ನಾಕುಲಂ ಪೊಲೀಸರ ಮುಂದೆ ಶರಣಾಗಿದ್ದಾರೆ.

ತನ್ನ ಅರೆ ನಗ್ನ ದೇಹದ ಮೇಲೆ ಪುತ್ರ ಹಾಗೂ ಪುತ್ರಿ ಪೈಂಟಿಂಗ್ ಮಾಡುತ್ತಿರುವ ವೀಡಿಯೊವನ್ನು ಅವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. “ರೆಹಾನಾ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ ನಾವು ಅವರಿಗೆ ಸಮನ್ಸ್ ನೀಡಿದ್ದೆವು. ನಮ್ಮ ಮುಂದೆ ಹಾಜರಾದ ಬಳಿಕ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡೆವು. ನಾವು ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

 ಫಾತಿಮಾ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಬಾಲನ್ಯಾಯ (ಮಕ್ಕಳ ಕಾಳಜಿ ಹಾಗೂ ರಕ್ಷಣೆ) ಕಾಯ್ದೆ 2015ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಫಾತಿಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿದ್ದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಹಾಗೂ ಕೃಷ್ಣ ಮುರಳಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಪೀಠ, ಫಾತಿಮಾ ಹಾಗೂ ಅವರ ಮಕ್ಕಳ ವೀಡಿಯೊ ಅಶ್ಲೀಲವಾಗಿದೆ ಎಂದು ಹೇಳಿತ್ತು.

 ಕೇರಳದ ದೇವಾಲಯಗಳಲ್ಲಿ ನಗ್ನ ದೇವತೆಗಳ ಮೂರ್ತಿಗಳು ಇವೆ. ದೇವಾಲಯದಲ್ಲಿ ಪ್ರಾರ್ಥಿಸುವವರ ಭಾವನೆ ಲೈಂಗಿಕವಾದುದಲ್ಲ. ಬದಲಾಗಿ ದೈವಿಕವಾದುದು. ಮಕ್ಕಳು ತಮ್ಮ ತಾಯಿಯ ಮೇಲೆ ಪೈಟಿಂಗ್ ಮಾಡಿದರೆ ಕಾನೂನಿನ ಅಡಿಯಲ್ಲಿ ಅದನ್ನು ಲೈಂಗಿಕ ತೃಪ್ತಿ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಎಂದು ಹೇಳಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯಲ್ಲಿ ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News