ಪ್ರಧಾನಿ ವಿರುದ್ಧ ಮಾನಹಾನಿಕರ ಟ್ವೀಟ್: ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ವಿರುದ್ಧ ಎಫ್ಐಆರ್

Update: 2020-08-09 14:48 GMT
ಫೋಟೊ ಕೃಪೆ: twitter.com/jitupatwari

ಭೋಪಾಲ್/ಇಂದೋರ್, ಆ. 9: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರ ಫೋಟೊವನ್ನು ತಿರುಚಿದ ಹಾಗೂ ಅವರ ವಿರುದ್ಧ ಅಗೌರವದ ಹೇಳಿಕೆ ನೀಡಿದ ಆರೋಪದಲ್ಲಿ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾಗೂ ಶಾಸಕ ಜಿತು ಪಟ್ವಾರಿ ಅವರ ವಿರುದ್ಧ ಇಂದೋರ್ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಇಂದೋರ್‌ನ ಸಂಸತ್ ಸದಸ್ಯ ಶಂಕರ್ ಲಾಲ್ವಾನಿ ಹಾಗೂ ಬಿಜೆಪಿಯ ಇತರ ಹಲವು ನಾಯಕರು ಸಲ್ಲಿಸಿದ ದೂರಿನ ಆಧಾರದಲ್ಲಿ ಇಂದೋರ್‌ನ ಛಾತ್ರಿಪುರ ಪೊಲೀಸ್ ಠಾಣೆ ಸಚಿವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದೆ. ಜಿತು ಪಟ್ಟಾರಿ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಯನ್ನು ಪ್ರಧಾನಿ ಅವರು ನೆರವೇರಿಸುವ ಫೋಟೊವನ್ನು ಹಾಕಿದ್ದರು ಹಾಗೂ ಪ್ರಧಾನಿ ಅವರ ವರ್ಚಸ್ಸಿಗೆ ಧಕ್ಕೆ ಉಂಟಾಗುವ ಹಾಗೂ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮಾನ ಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಅನಂತರ ಈ ಪೋಸ್ಟ್ ಅನ್ನು ಅಳಿಸಿರುವ ಜಿತು ಪಟ್ವಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಅವರ ವಿರುದ್ಧ ತಾನು ಯಾವುದೇ ಮಾನಹಾನಿಕರ ಅಥವಾ ಅಗೌರವಯುತ ಹೇಳಿಕೆ ನೀಡಿಲ್ಲ. ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ವಿಫಲತೆಯ ಬಗ್ಗೆ ಹೇಳಿಕೆ ನೀಡಿದ್ದೆ ಎಂದಿದ್ದಾರೆ.

ಪೊಲೀಸರು ಈ ವಿಷಯದ ಕುರಿತು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಬೆಳಕಿಗೆ ಬರುವ ಸತ್ಯವನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂದೋರ್‌ನ ಪೊಲೀಸ್ ಡಿಜಿಪಿ ಹರಿನಾರಾಯಣಾಚಾರಿ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News