ಸೂರತ್: ಕೊರೋನದಿಂದ ಮೃತಪಟ್ಟ ಹಿಂದೂಗಳ ಅಂತ್ಯಸಂಸ್ಕಾರ ನಡೆಸುವ ಅಬ್ದುರ್ರಹ್ಮಾನ್

Update: 2020-08-10 08:31 GMT

ಸೂರತ್: ಹಲವು ವರ್ಷಗಳಿಂದ ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿರುವ ಅಬ್ದುರ್ರಹ್ಮಾನ್ ಮಲಬಾರಿ (62), ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಗಮನಾರ್ಹ ರೀತಿಯ ಸೇವೆ ಮಾಡುತ್ತಿದ್ದಾರೆ.

1998ರ ಚಂಡಮಾರುತ, 2006ರ ಸೂರತ್ ಪ್ರವಾಹ, 2001ರ ಭೂ ಭೂಕಂಪ, 2005 ಮತ್ತು 2013ರ ಮುಂಬೈ ಹಾಗೂ ಕೇದಾರನಾಥ ಪ್ರವಾಹ ಹೀಗೆ ಎಲ್ಲ ದುರಂತಗಳ ಸಂದರ್ಭದಲ್ಲೂ ಹಾಜರಾಗಿದ್ದ ಅಬ್ದುರ್ರಹ್ಮಾನ್  ಕೋವಿಡ್-19 ಸಂತ್ರಸ್ತರಿಗೂ ಸೇವೆ ನೀಡುತ್ತಿದ್ದಾರೆ.

ಅದು ದಹನ ಇರಲಿ; ದಫನ ಇರಲಿ ಆಯಾ ಧರ್ಮದ ಸಂಪ್ರದಾಯಕ್ಕೆ ಅನುಸಾರವಾಗಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಜತೆಗೆ ಚಿತೆಯ ಭಸ್ಮವನ್ನೂ ಸಂಬಂಧಪಟ್ಟವರ ಕುಟುಂಬಕ್ಕೆ ವಿತರಿಸುತ್ತಾರೆ. ಇತರ ಯಾರು ಮುಂದೆ ಬಾರದಿದ್ದರೂ ಶವಗಳಿಗೆ ಅಂತ್ಯ ಸಂಸ್ಕಾರ ಮಾಡುವಲ್ಲಿ ಇವರು ಹಿಂದೆ ಬಿದ್ದದ್ದೇ ಇಲ್ಲ.

ಇದೀಗ ಕೊರೋನ ವೈರಸ್‍ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂರತ್ ಮಹಾನಗರ ಪಾಲಿಕೆಗೆ ನೆರವಾಗುತ್ತಿದ್ದಾರೆ. ಕೋವಿಡ್ ಸಂತ್ರಸ್ತರ ಶವಸಂಸ್ಕಾರದ ಹೊಣೆಯನ್ನು ಅವರ ಏಕತಾ ಟ್ರಸ್ಟ್ ಗೆ ವಹಿಸಲಾಗಿದೆ. ಮಾರ್ಚ್‍ನಿಂದೀಚೆಗೆ ಅಬ್ದುರ್ರಹ್ಮಾನ್ ಸುಮಾರು 1200 ಕೋವಿಡ್ ರೋಗಿಗಳ ಶವಗಳ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಪೈಕಿ ಸುಮಾರು 800 ಮಂದಿ ಹಿಂದೂಗಳು. ಸಾಧ್ಯವಿರುವ ಎಲ್ಲ ಮುಂಜಾಗ್ರತೆಗಳನ್ನು ಕೈಗೊಂಡರೂ ಮಾರ್ಚ್ ಕೊನೆಗೆ ಇವರಿಗೂ ಸೋಂಕು ತಗುಲಿತ್ತು. ಆದರೂ ಶೀಘ್ರ ಚೇತರಿಸಿಕೊಂಡು ಮತ್ತೆ ತಮ್ಮ ಕರ್ತವ್ಯಕ್ಕೆ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News