ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಕೊರೋನ ಲಸಿಕೆ ಸಿದ್ಧ: ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ

Update: 2020-08-10 15:10 GMT

ಹೊಸದಿಲ್ಲಿ, ಆ. 10: ಕೊರೋನ ಲಸಿಕೆ ಈ ವರ್ಷಾಂತ್ಯದಲ್ಲಿ ಸಿದ್ಧವಾಗಬಹುದು ಎಂದು ಪುಣೆ ಮೂಲದ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲ ಹೇಳಿದ್ದಾರೆ.

ಲಸಿಕೆಯ ಬೆಲೆಯನ್ನು ಎರಡು ತಿಂಗಳ ಒಳಗೆ ಪ್ರಕಟಿಸಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.

ಕೊರೋನ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಆಸ್ತ್ರಾ ಝೆನೇಕಾದೊಂದಿಗಿನ ಒಪ್ಪಂದದಲ್ಲಿ ಎಸ್‌ಐಐ ಕೂಡ ಪಾಲ್ಗೊಂಡಿದೆ.

‘‘ಈ ವರ್ಷಾಂತ್ಯದಲ್ಲಿ ನಾವು ಲಸಿಕೆ ಹೊಂದಿರಬೇಕು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನೊಂದಿಗೆ ಪಾಲುದಾರಿಕೆಯಲ್ಲಿ ಭಾರತದಲ್ಲಿ ಕೆಲವು ಸಾವಿರ ರೋಗಿಗಳ ಮೇಲೆ ಪ್ರಯೋಗ ನಡೆಸಲಿದ್ದೇವೆ. ಲಸಿಕೆಯ ಅಂತಿಮ ಬೆಲೆಯನ್ನು ಎರಡು ತಿಂಗಳ ಒಳಗೆ ಪ್ರಕಟಿಸಲಾಗುವುದು’’ ಎಂದು ಪೂನಾವಾಲ ಹೇಳಿದ್ದಾರೆ.

ಆಗಸ್ಟ್ ಅಂತ್ಯದ ವೇಳೆಗೆ ಪುಣೆ ಹಾಗೂ ಮುಂಬೈಯ 4 ಸಾವಿರದಿಂದ 5 ಸಾವಿರ ಜನರಿಗೆ ಲಸಿಕೆ ನೀಡಲಾಗುವುದು. ಈ ವರ್ಷದ ಅಂತ್ಯದೊಳಗೆ 30 ಕೋಟಿಯಿಂದ 40 ಕೋಟಿ ಕೊರೋನ ಲಸಿಕೆಯ ಡೋಸ್‌ಗಳನ್ನು ಉತ್ಪಾದಿಸುವ ಗುರಿಯನ್ನು ಕಂಪೆನಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

10 ಕೋಟಿ ಕೊರೋನ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಸಂಸ್ಥೆ ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಪೌಂಡೇಶನ್ ಹಾಗೂ ಗವಿ-ದಿ ವ್ಯಾಕ್ಸಿನ್ಸ್ ಅಲಯನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೆಳ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ. ಇದರ ಒಂದು ಡೋಸ್‌ನ ಬೆಲೆ 250 ರೂಪಾಯಿ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News