ಚೀನಾದ ಆಕ್ರಮಣಶೀಲತೆ ವಿರೋಧಿಸಿ ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

Update: 2020-08-10 16:34 GMT

ವಾಶಿಂಗ್ಟನ್, ಆ. 10: ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ಧೋರಣೆ ಮತ್ತು ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ಉಯಿಘರ್ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಅದು ನಡೆಸುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ಭಾರತೀಯ ಅಮೆರಿಕನ್ನರ ಗುಂಪೊಂದು ರವಿವಾರ ವಾಶಿಂಗ್ಟನ್‌ನಲ್ಲಿ ಪ್ರತಿಭಟನೆ ನಡೆಸಿತು.

ಮುಖಗವಸುಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡ ಪ್ರತಿಭಟನಕಾರರು ಅಮೆರಿಕದ ಸಂಸತ್ ಕಟ್ಟಡದ ಎದುರು ಭಾಗದಲ್ಲಿರುವ ಐತಿಹಾಸಿಕ ನ್ಯಾಶನಲ್ ಮಾಲ್‌ನ ಸಮೀಪ ಜಮಾಯಿಸಿ ಚೀನಾ ವಿರೋಧಿ ಫಲಕಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸಿದರು ಹಾಗೂ ಚೀನಾ ವಿರೋಧಿ ಘೋಷಣೆಗಳನ್ನು ಕೂಗಿದರು.

‘‘ಈ ವರ್ಷದ ಬೇಸಿಗೆಯಲ್ಲಿ ಜಗತ್ತು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾಗ, ಚೀನಾವು ಇತರರ ಜಮೀನನ್ನು ಆಕ್ರಮಿಸಿಲು ಪ್ರಯತ್ನಿಸುತ್ತಿತ್ತು. ಅದು ಭಾರತಕ್ಕೆ ಸಂಬಂಧಿಸಿದ ಲಡಾಖ್‌ನಲ್ಲಿ ಮಾತ್ರವಲ್ಲ, ತನ್ನ ಇತರ ನೆರೆಯ ದೇಶಗಳೊಂದಿಗೂ ಚೀನಾ ಇದೇ ರೀತಿಯಲ್ಲಿ ವರ್ತಿಸುತ್ತಿದೆ’’ ಎಂದು ‘ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಯುಎಸ್‌ಎ’ ಎಂಬ ಗುಂಪಿನ ಅಡಪ ಪ್ರಸಾದ್ ಹೇಳಿದರು.

ಜೂನ್ 15ರಂದು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಘೋಷಿಸಿದೆ. ಆದರೆ, ತನ್ನ ಕಡೆಯ ಸಾವು-ನೋವಿನ ಸಂಖ್ಯೆಯನ್ನು ಚೀನಾ ಈವರೆಗೆ ಪ್ರಕಟಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News