ಟ್ರಯಲ್ ಆಧಾರದಲ್ಲಿ ಜಮ್ಮು-ಕಾಶ್ಮೀರದಲ್ಲಿ 4ಜಿ ಇಂಟರ್‌ನೆಟ್ ಸೇವೆಗೆ ಕೇಂದ್ರ ಅವಕಾಶ

Update: 2020-08-11 07:06 GMT

   ಹೊಸದಿಲ್ಲಿ, ಆ.11: ಜಮ್ಮು ಹಾಗೂ ಕಾಶ್ಮೀರದ ತಲಾ ಒಂದು ಜಿಲ್ಲೆಗಳಲ್ಲಿ ಆಗಸ್ಟ್ 15ರ ಬಳಿಕ ಟ್ರಯಲ್ ಆಧಾರದಲ್ಲಿ 4 ಜಿ ಇಂಟರ್‌ನೆಟ್ ಸೇವೆಗಳನ್ನು ಆರಂಭಿಸಲು ಅವಕಾಶ ನೀಡಲಾಗುವುದು. ಈ ಕುರಿತು ನಿರ್ಧರಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಸರಕಾರ ಇಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಅಂತರ್‌ರಾಷ್ಟ್ರೀಯ ಗಡಿ ಅಥವಾ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಿರ್ಬಂಧ ಸಡಿಲಿಕೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ.
 ಉಗ್ರರ ಚಟುವಟಿಕೆಗಳು ಕಡಿಮೆ ಇರುವ ಪ್ರದೇಶಗಳಲ್ಲಿ 4 ಜಿ ಇಂಟರ್‌ನೆಟ್ ಸಿಗಲಿದೆ. ಸರಕಾರ ಎರಡು ತಿಂಗಳ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಲಿದೆ ಎಂದು ಕೇಂದ್ರ ತಿಳಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ಬಳಿಕ ಕಳೆದ ಒಂದು ವರ್ಷದಿಂದ ಜಮ್ಮು-ಕಾಶ್ಮೀರದಲ್ಲಿ ಅತ್ಯಂತ ವೇಗದ ಇಂಟರ್‌ನೆಟ್ ಸೇವೆಯನ್ನು ರದ್ದುಪಡಿಸಲಾಗಿತ್ತು.
ಟ್ರಯಲ್ ಆಧಾರದಲ್ಲಿ ಜಮ್ಮು-ಕಾಶ್ಮೀರದಲ್ಲಿ ಇಂಟರ್‌ನೆಟ್ ಮರುಸ್ಥಾಪಿಸಲಾಗುವುದು ಎಂದು ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.
ನಿರ್ದಿಷ್ಟ ಪ್ರದೇಶಗಳಲ್ಲಿ 4ಜಿ ಸೇವೆಗಳನ್ನು ಮರುಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News