ದುಷ್ಕರ್ಮಿಗಳಿಂದ ಕಿರುಕುಳ ಆರೋಪ; ಪ್ರತಿಭಾನ್ವಿತ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

Update: 2020-08-11 13:58 GMT

ಬುಲಂದ್ ಶಹರ್: ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಉತ್ತರ ಪ್ರದೇಶದ 20 ವರ್ಷದ ಯುವತಿಯೊಬ್ಬರು ಬುಲಂದ್ ಶಹರ್ ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.

12ನೆ ತರಗತಿಯಲ್ಲಿ 98 ಶೇ. ಅಂಕಗಳನ್ನು ಗಳಿಸಿದ್ದ ಯುವತಿ ಸುದೀಕ್ಷಾ ಭಾಟಿ ಅಮೆರಿಕ ವಿವಿಯ ಸ್ಕಾಲರ್ ಶಿಪ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ಈ ಅಪಘಾತಕ್ಕೆ ಇಬ್ಬರು ಯುವಕರು ಕಾರಣ ಎಂದು ಭಾಟಿಯವರ ಕುಟುಂಬಸ್ಥರು ಆರೋಪಿಸಿದ್ದಾರೆ.

ತನ್ನ ಮಾವನ ಜೊತೆ ದ್ವಿಚಕ್ರ ವಾಹನದಲ್ಲಿ ಸುದೀಕ್ಷಾ ಸಾಗುತ್ತಿದ್ದಾಗ ಬೆನ್ನತ್ತಿದ್ದ ಇಬ್ಬರು ದುಷ್ಕರ್ಮಿಗಳು ಕಿರುಕುಳ ನೀಡಲು ಯತ್ನಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ಯಾವುದೇ ಕಿರುಕುಳದ ಸಾಕ್ಷಿಗಳು ತನಿಖಾ ತಂಡಕ್ಕೆ ಲಭಿಸಿಲ್ಲ. ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ಇಬ್ಬರು ಯುವಕರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಸುದೀಕ್ಷಾ ಜೂನ್ ನಲ್ಲಿ ಬುಲಂದ್ ಶಹರ್ ಗೆ ವಾಪಸಾಗಿದ್ದು, ಆಗಸ್ಟ್ ನಲ್ಲಿ ಅವರು ಅಮೆರಿಕಕ್ಕೆ ಹೋಗಬೇಕಾಗಿತ್ತು. 12ನೆ ತರಗತಿ ಸಿಬಿಎಸ್ ಇ ಪರೀಕ್ಷೆಯಲ್ಲಿ ಟಾಪರ್ ಆದ ಬಳಿಕ ಪ್ರತಿಷ್ಠಿತ ಬ್ಯಾಬ್ಸನ್ ಕಾಲೇಜಿಗೆ ಪ್ರವೇಶ ಪಡೆದಿದ್ದರು.

“ಇನ್ನೊಂದು ಬೈಕ್ ನಲ್ಲಿ ಇಬ್ಬರು ಯುವಕರಿದ್ದರು. ಅವರು ಆಕೆಗೆ ಕಿರುಕುಳ ನೀಡುತ್ತಿದ್ದರು. ನಾವು ಬುಲಂದ್ ಶಹರ್ ತಲುಪಿ ಗ್ರಾಮವೊಂದಕ್ಕೆ ಹೋದಾಗ ನಮ್ಮನ್ನು ಹಲವು ಬಾರಿ ಅವರು ಓವರ್ ಟೇಕ್ ಮಾಡಿದರು. ಅತೀ ವೇಗದಿಂದ ಅವರು ಬೈಕ್ ಚಲಾಯಿಸುತ್ತಿದ್ದರು. ನಂತರ ಅವರು ಸ್ಟಂಟ್ ಮಾಡಲು ಆರಂಭಿಸಿದರು. ನಾನು ಬೈಕ್ ನಿಧಾನ ಮಾಡಿದೆ. ಆದರೆ ಮತ್ತೊಂದು ಬೈಕ್ ನಮಗೆ ಢಿಕ್ಕಿ ಹೊಡೆಯಿತು. ನಾಲ್ಕು ಜನರೂ ಕೆಳಗೆ ಬಿದ್ದೆವು. ಆದರೆ ಆಕೆಯ ತಲೆಗೆ ಗಾಯಗಳಾಯಿತು. ನಾವು ಅಪಘಾತಕ್ಕೀಡಾದ ತಕ್ಷಣ ಬೈಕ್ ನಲ್ಲಿದ್ದವರು ಕಾಲ್ಕಿತ್ತಿದ್ದರು” ಸುಧೀಕ್ಷಾರ ಮಾವ ಆರೋಪಿಸಿದ್ದಾರೆ.

ಆದರೆ ಈ ಎಲ್ಲಾ ಆರೋಪಗಳನ್ನು ಬುಲಂದ್ ಶಹರ್ ಪೊಲೀಸರು ನಿರಾಕರಿಸಿದ್ದಾರೆ. “ಬೈಕ್ ಚಲಾಯಿಸುತ್ತಿದ್ದದ್ದು ಅಪ್ರಾಪ್ತನಾಗಿರು ಆಕೆಯ ಸಹೋದರ. ಸುಧೀಕ್ಷಾಳ ಮಾವನಲ್ಲ. ಇದುವರೆಗೆ ಕಿರುಕುಳದ ಬಗ್ಗೆ ಯಾವುದೇ ಸಾಕ್ಷಿಯಿಲ್ಲ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News