ಹಡಪದ ಅಪ್ಪಣ್ಣನವರೇ ಸಂಗಮೇಶ್ವರದ ಅಪ್ಪಣ್ಣ

Update: 2020-08-11 19:30 GMT

ಭಾಗ 2

ಸಂಗಮೇಶ್ವರದ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಒಬ್ಬರೇ ಎನ್ನಲು ಕೆಳಗೆ ಕಾಣಿಸಿದ ಎರಡು ವಚನಗಳು ಕೂಡ ಸಹಾಯಕ್ಕೆ ಬರುತ್ತವೆ.

 ‘‘ದೇವದೇವ ಮಹಾಪ್ರಸಾದ; ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯ!
ತನು ಮನ ಧನವ ಹಿಂದಿಕ್ಕಿಕೊಂಡಿಪ್ಪವಂಚಕ ನಾನಯ್ಯಿ!
ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ? ಚಕಿತಮಭಿಧತ್ತೇ ಶ್ರುತಿರಪಿ ಎನಲು,
ಎಮ್ಮ ನುಡಿ ನಿಮ್ಮ ಶರಣರ ತಾಗಬಲ್ಲುದೆ?
ಹಣೆಯ ಹೊಣೆಯ ತೋರಿ ಉದರವ ಹೊರೆವ,
ನಿಮ್ಮ ಮರೆಯಲಡಗಿಪ್ಪಹಡಪಿಗ ನಾನಯ್ಯ!
ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಂಗೆ ಬಾರರು.
ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ ಸಂಗನಬಸವಣ್ಣಾ.’’

 ಎಂಬ ವಚನ ‘ಪ್ರಭು ಕಲ್ಯಾಣಕ್ಕೆ ಬಂದ ಸಂಪಾದನೆ’ಯಲ್ಲಿದೆ. ಅಂದಮೇಲೆ ಇದು ಹಡಪದ ಅಪ್ಪಣ್ಣನವರ ವಚನ ಎಂದಾಯಿತು. ಆದರೆ ಈ ವಚನ ಸಂಗಮೇಶ್ವರದ ಅಪ್ಪಣ್ಣನ ವಚನಗಳ ಜೊತೆ ಇರುವುದರಿಂದ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಬೇರೆ ಅಲ್ಲ ಎಂದಾಯಿತು. ಹಡಪದ ಅಪ್ಪಣ್ಣನವರು ಹಡಪಿಗ ಸಮಾಜದಿಂದ ಬಂದವರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ. ‘ನಿಮ್ಮ ಮರೆಯಲ್ಲಡಗಿಪ್ಪ’ಪದಪುಂಜ ಅಪ್ಪಣ್ಣನವರು ಬಸವಣ್ಣನವರಿಗೆ ಆಪ್ತ ಸಹಾಯಕರಾಗಿದ್ದರು ಎಂಬುದನ್ನು ಸೂಚಿಸುತ್ತದೆ.
 ಈ ವಚನವಲ್ಲದೆ ಅಲ್ಲಮಪ್ರಭುಗಳು ಹಡಪದ ಅಪ್ಪಣ್ಣನವರನ್ನು ‘ಸಂಗಮೇಶ್ವರದ ಅಪ್ಪಣ್ಣ’ ಎಂದು ಕರೆದ ವಚನವೊಂದು ಇಬ್ಬರೂ ಒಂದೇ ಎಂಬುದನ್ನು ಸೂಚಿಸುತ್ತದೆ.

 ‘‘ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ,
ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು.
ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ ಮತ್ತೊಂದಾದನವ.
ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು,
ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು.
ಗಣಿತ ಗುಣಿತವನಳಿದುಳಿದು ಅಗಣಿತನಚಳಿತನಾದ ಅಪ್ಪಣ್ಣನು.
ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ,
ಅಮಳೋಕ್ಯವಾದ ನಿಜದ ನಿಲವ,
ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ
ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು’’

ಎಂದು ಅಲ್ಲಮಪ್ರಭುಗಳು ತಿಳಿಸಿದ್ದಾರೆ. ಅಲ್ಲಮಪ್ರಭುಗಳು ಸಿದ್ಧರಾಮರ ಜೊತೆ ಕಲ್ಯಾಣಕ್ಕೆ ಬಂದಾಗ ಅವರನ್ನು ಮೊದಲಿಗೆ ಭೇಟಿಯಾದವರು ಹಡಪದ ಅಪ್ಪಣ್ಣನವರು. ಹಡಪದ ಅಪ್ಪಣ್ಣನವರನ್ನು ಸಂಗಮೇಶ್ವರದ ಅಪ್ಪಣ್ಣ ಎಂದು ಅಲ್ಲಮಪ್ರಭುಗಳು ಕರೆದ ಕಾರಣ ಹಡಪದ ಅಪ್ಪಣ್ಣನವರೇ ಸಂಗಮೇಶ್ವರದ ಅಪ್ಪಣ್ಣ ಆಗಿರಲು ಸಾಧ್ಯ.

ಸಂಗಮೇಶ್ವರದ ಅಪ್ಪಣ್ಣ, ಬಸವಣ್ಣನವರ ಸಮಕಾಲೀನನೆಂಬ ವಿಷಯವನ್ನು ಬಿಟ್ಟರೆ ಮತ್ತೆ ಯಾವ ಚಾರಿತ್ರಿಕ ಸಂಗತಿಗಳೂ ದೊರೆಯುವುದಿಲ್ಲ. ಎಂದು ಸಂಕೀರ್ಣ ವಚನಗಳ 4ನೇ ಸಂಪುಟದ ಸಂಪಾದಕ ಬಿ.ಆರ್. ಹಿರೇಮಠ ಅವರು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಹಡಪದ ಅಪ್ಪಣ್ಣನವರೇ ಸಂಗಮೇಶ್ವರದ ಅಪ್ಪಣ್ಣ ಎನ್ನಲು ಇಂತಹ ಹೇಳಿಕೆಗಳೂ ಪುಷ್ಟಿ ನೀಡುತ್ತವೆ. ಅಪ್ಪಣ್ಣನವರ ಕಾಯಕದ ಬಗ್ಗೆಯೂ ವಿಭಿನ್ನ ವಿಚಾರಗಳಿವೆ. ಕ್ಷೌರಿಕರ ಸಾಮಾನುಗಳಿರುವ ಕೈ ಪೆಟ್ಟಿಗೆಗೆ ಹಡಪ ಎನ್ನುವ ಹಾಗೆ ಎಲೆ ಅಡಿಕೆಗಳನ್ನು ಇಟ್ಟುಕೊಳ್ಳುವ ಚೀಲಕ್ಕೂ ಹಡಪ ಅಥವಾ ಸಂಚಿ ಎನ್ನುತ್ತಾರೆ. ಅವರು ಕ್ಷೌರಿಕ ಕಾಯಕ ಮಾಡುತ್ತಿದ್ದರು ಎಂಬುದಕ್ಕೆ ಅವರ ವಚನಗಳಲ್ಲಿ ಯಾವುದೇ ಸುಳಿವು ಇಲ್ಲ. ಅದೇ ರೀತಿ ಎಲೆ ಅಡಿಕೆ ಕೊಡುವ ಕಾಯಕ ಮಾಡುತ್ತಿದ್ದರು ಎಂಬ ಸುಳಿವೂ ಇಲ್ಲ. ಆದರೆ ಬಸವಣ್ಣನವರಿಗೆ ಸಂಬಂಧಿಸಿದಂತೆ ಅವರ ವಚನಗಳಲ್ಲಿ ಬರುವ ಸ್ಪಷ್ಟತೆಯ ಮಾತುಗಳ ಕಡೆಗೆ ಗಮನ ಹರಿಸಿದರೆ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು ಎಂದು ಹೇಳಲು ಸಾಧ್ಯವಿದೆ.

ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ ಘನವು ನೋಡಯ್ಯಿ.
ಕಾಬಡೆ ಕಂಗಳಿಗೆ ಅಸಾಧ್ಯ, ಮುಟ್ಟುವಡೆ ಸೋಂಕಿಂಗಸಾಧ್ಯ,
ಮಾತನಾಡಿಸಿ ನೋಡಿದಡೆ ವಾಙ್ಮನಾತೀತ,
ನಿಂದಡೆ ನೆಳಲಿಲ್ಲ, ಸುಳಿದಡೆ ಹೆಜ್ಜೆಯಿಲ್ಲ.
ಪ್ರಭುದೇವರೆಂಬ ಭಾವ ತೋರುತ್ತದೆ.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರ
ಚರಣವ ಹಿಡಿಯಲೇಳಾ ಸಂಗನಬಸವಣ್ಣಾ.

ಪ್ರಭು ಕಲ್ಯಾಣಕ್ಕೆ ಬಂದ ಸಂಪಾದನೆಯಲ್ಲಿ, ಹಡಪದ ಅಪ್ಪಣ್ಣನವರು ಪ್ರಭುದೇವರ ಕುರಿತು ಬಸವಣ್ಣನವರಿಗೆ ಬಿನ್ನೈಸುವ ಪ್ರಸ್ತಾವದ ವಚನವಿದು. ಇದು ಅಪ್ಪಣ್ಣನವರ ವ್ಯಕ್ತಿತ್ವ, ಆಪ್ತ ಕಾರ್ಯದರ್ಶಿಯಂತಹ ಹುದ್ದೆ ಮತ್ತು ಬಸವಣ್ಣನವರ ಜೊತೆಗಿದ್ದ ಘನವಾದ ಸಂಬಂಧವನ್ನು ಸೂಚಿಸುವಂಥದ್ದು.

ಮಸಬಿನಾಳದ ಅಪ್ಪಣ್ಣ
ಹಡಪದ ಅಪ್ಪಣ್ಣನವರು ಮಸಬಿನಾಳದವರು ಎಂಬುದು ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ತಿಳಿದು ಬಂದಿತು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ಇರುವ ಹಡಪದ ಸಮಾಜದ ಶಂಕರೆಪ್ಪ ಬಸಪ್ಪ ಹಡಪದ ಅವರು ಹೇಳುತ್ತಾರೆ. ಹಡಪದ ಸಮಾಜದ ಬಸವಪ್ರಿಯ ಅನ್ನದಾನ ಭಾರತಿ ಶರಣರು ಮಸಬಿನಾಳಕ್ಕೆ ಬಂದಾಗ ಈ ವಿಷಯ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಅಪ್ಪಣ್ಣನವರು ತಮ್ಮ ಮನೆತನದ ಪೂರ್ವಜರು ಎಂಬುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ. ತಮ್ಮ ತಂದೆ, ಅಜ್ಜ ಮತ್ತು ಪೂರ್ವಿಕರು ಲಿಂಗಪೂಜಕರಾಗಿದ್ದರು ಎಂದು ಶಂಕರೆಪ್ಪ ಹೇಳುತ್ತಾರೆ.

ಮಸಬಿನಾಳ ಗ್ರಾಮ, ಬಸವಣ್ಣನವರ ತಾಯಿ ಮಾದಲಾಂಬಿಕೆಯ ತವರುಮನೆ ಇಂಗಳೇಶ್ವರದಿಂದ 6 ಕಿಲೊಮೀಟರ್ ದೂರದಲ್ಲಿದ್ದು ತಂದೆ ಮಾದರಸರ ಬಾಗೇವಾಡಿಯಿಂದ 10 ಕಿಲೊಮೀಟರ್ ದೂರದಲ್ಲಿದೆ. ಮಸಬಿನಾಳದಲ್ಲಿರುವ ಗಚ್ಚಿನಮಠದಲ್ಲಿ ಚಿಕ್ಕ ಶಿಲಾಲೇಖವೊಂದಿದೆ. ಆದರೆ ಶಾಸನ ಸಂಪುಟದಲ್ಲಿ ಅದರ ದಾಖಲೆಯಾಗಿಲ್ಲ. ಅದು ತ್ರುಟಿತ ಶಾಸನವಾಗಿರುವುದರಿಂದ ಮತ್ತು ಇದ್ದ ಅಕ್ಷರಗಳು ಮಾಸಿ ಹೋಗಿದ್ದರಿಂದ ಅದರಲ್ಲಿ ಹಡಪದ ಅಪ್ಪಣ್ಣನವರ ಬಗ್ಗೆ ಸುಳಿವು ಸಿಗುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಬಹುದು.

ಅಪ್ಪಣ್ಣ ಮತ್ತು ಲಿಂಗಮ್ಮನವರ ಕುರಿತ ಹಸ್ತಪ್ರತಿ
 ಶತಮಾನಕ್ಕೂ ಹಿಂದಿನ ಕೋರಿ ಕಾಗದದ ಹಸ್ತಪ್ರತಿಯಲ್ಲಿ ಹಡಪದ ಅಪ್ಪಣ್ಣನವರ ಮತ್ತು ಲಿಂಗಮ್ಮನವರ ಚಾರಿತ್ರಿಕ ಅಂಶಗಳಿವೆ. ನಾಲ್ಕು ಕೋರಿ ಕಾಗದದ ಹಾಳೆಗಳಲ್ಲಿ ಅವರ ಸಂಕ್ಷಿಪ್ತ ಚರಿತ್ರೆಯನ್ನು ಬರೆಯಲಾಗಿದೆ. ಇನ್ನೊಂದು ಪ್ರತಿಯಲ್ಲಿ ಹಡಪದ ಅಪ್ಪಣ್ಣನವರ ಜಾತಕವಿದೆ. ದೇವದುರ್ಗದ ದೊಡ್ಡಪ್ಪತಾತಾ ಎಂಬವರ ಮನೆಯಲ್ಲಿ ಈ ಹಸ್ತಪ್ರತಿಗಳು ಸಿಕ್ಕಿವೆ. ತಮ್ಮ ಪೂರ್ವಜರು ಹೈದರಾಬಾದ್ ನಿಜಾಮರ ರಾಜವೈದ್ಯರಾ ಗಿದ್ದರು ಎಂದು ದೊಡ್ಡಪ್ಪತಾತಾ ಹೇಳುತ್ತಾರೆ. ಅವರ ಮನೆತನದ ಪೂರ್ವಜರು ಶತಮಾನಗಳಿಂದ ಇಂತಹ ಕೋರಿ ಕಾಗದದ ಪ್ರತಿಗಳನ್ನು ಸಂಗ್ರಹಿಸುತ್ತ ಬಂದಿದ್ದಾರೆ. ಬಸವಪ್ರಿಯ ಅನ್ನದಾನ ಭಾರತಿ ಶರಣರು ಸಮಾರಂಭವೊಂದರಲ್ಲಿ ಭೇಟಿಯಾದಾಗ ದೊಡ್ಡಪ್ಪತಾತಾ ಅವರು ಹಡಪದ ಅಪ್ಪಣ್ಣನವರ ಕುರಿತ ಹಸ್ತಪ್ರತಿಯ ವಿಚಾರವನ್ನು ತಿಳಿಸಿದ್ದಾರೆ. ನಂತರ ಅವರು ತಮ್ಮ ಶಿಷ್ಯ ಸಿಂಧನೂರಿನ ಎಚ್.ಜಿ. ಹಂಪಣ್ಣ ಅವರಿಗೆ ಈ ಹಸ್ತಪ್ರತಿಗಳ ಕುರಿತು ಹೇಳಿದ್ದಾರೆ. ತದನಂತರ ಹಂಪಣ್ಣನವರು ದೇವದುರ್ಗಕ್ಕೆ ಹೋಗಿ ಹಸ್ತಪ್ರತಿಗಳ ಝೆರಾಕ್ಸ್ ಪ್ರತಿಗಳನ್ನು ತಂದಿದ್ದಾರೆ. ಅವರಿಂದಾಗಿ ನನಗೆ ಈ ಹಸ್ತಪ್ರತಿಗಳು ಸಿಕ್ಕಿವೆ. ಅಪ್ಪಣ್ಣ ಮತ್ತು ಲಿಂಗಮ್ಮನವರಿಗೆ ಸಂಬಂಧಿಸಿದ ಈ ಹಸ್ತಪ್ರತಿಗಳನ್ನು ಸೋಮಶೇಖರ ಶಿವಾಚಾರ್ಯ ಎಂಬವರು ತಾಡೋಲೆಯಿಂದ ಕೋರಿ ಕಾಗದದಲ್ಲಿ ಪ್ರತಿ ಮಾಡಿರುವುದಾಗಿ ತಿಳಿಸಲಾಗಿದೆ. ಅಪ್ಪಣ್ಣನವರ ಜಾತಕಕ್ಕೆ ಸಂಬಂಧಿಸಿದ ಕೋರಿ ಕಾಗದ ಪ್ರತಿಯನ್ನು ಶಾಂತಯ್ಯಸ್ವಾಮಿ ಎಂಬವರು ತಯಾರಿಸಿದ್ದಾರೆ. ಅವರು ಕೂಡ ಬೇರೊಂದು ತಾಡೋಲೆಯಿಂದ ಪ್ರತಿ ಮಾಡಿರುವುದಾಗಿ ಹೇಳಿದ್ದಾರೆ. ಆ ಜಾತಕದ ಪ್ರಕಾರ ಜನ್ಮನಾಮ ಜೀವಣ್ಣ ಎಂದಿದ್ದು ಅಪ್ಪಣ್ಣ ಎಂಬುದು ನಡೆನಾಮವಾಗಿದೆ. ಅಪ್ಪಣ್ಣನವರ ಊರು ಮಸಬಿನಾಳ, ತಂದೆ ಚೆನ್ನವೀರಪ್ಪ, ತಾಯಿ ದೇವಕಮ್ಮ ಎಂದು ಹಸ್ತಪ್ರತಿಯಲ್ಲಿ ತಿಳಿಸಲಾಗಿದೆ.

ವಿದ್ಯಾಪ್ರವೀಣ ಅಪ್ಪಣ್ಣ
ಚೆನ್ನವೀರಪ್ಪಮತ್ತು ದೇವಕಮ್ಮನವರ ಜ್ಯೇಷ್ಠಪುತ್ರ ಅಪ್ಪಣ್ಣನವರು ಬಾಲ್ಯದಲ್ಲಿ ಮಸಬಿನಾಳ ಗ್ರಾಮದ ಶಿವಶಂಕರಯ್ಯಸ್ವಾಮಿ ಹಿರೇಮಠ ಎಂಬವರಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಇಂದಿನ ವಿಜಯಪುರದ ಗಣಾಚಾರಿ ಮಠದಲ್ಲಿ ಈಶ್ವರಯ್ಯ ಗಣಾಚಾರಿ ಅವರಿಂದ ಹೆಚ್ಚಿನ ಧಾರ್ಮಿಕ ಶಿಕ್ಷಣ ದೊರೆಯಿತು. ಇಲ್ಲಿ ಅವರು ವೇದಾಗಮಗಳಲ್ಲಿ ಹೆಚ್ಚಿನ ಪಾಂಡಿತ್ಯ ಪಡೆದರು. ಅಪ್ಪಣ್ಣನವರು ವಿಜಯಪುರದಲ್ಲಿದ್ದಾಗ ಗುರು ಈಶ್ವರಯ್ಯನವರ ಜೊತೆ ಕೂಡಲಸಂಗಮಕ್ಕೆ ಹೋಗಿ ಐದು ದಿನ ಉಳಿದು ಪ್ರತಿದಿನ ರುದ್ರಾಭಿಷೇಕ ಮಾಡಿಸಿದ ನಂತರ ಗಣಗಳಿಗೆ ಪ್ರಸಾದ ವಿತರಣೆ ಮಾಡಿದರು. ಹಸ್ತಪ್ರತಿಯಲ್ಲಿನ ದಂತಕಥೆಯ ಪ್ರಕಾರ ಕೊನೆಯ ದಿನದ ಮಧ್ಯರಾತ್ರಿ ಸಮಯದಲ್ಲಿ ಅಪ್ಪಣ್ಣನವರಿಗೆ ಎಚ್ಚರವಾದಾಗ ಗುರು ಈಶ್ವರಯ್ಯನವರ ಜೊತೆ ಸಾಕ್ಷಾತ್ ಸಂಗಮನಾಥ ದೇವರು ಮಾತನಾಡುತ್ತಿರುವ ದೃಶ್ಯವನ್ನು ಕಂಡರು. ಆಶ್ಚರ್ಯಚಕಿತರಾಗಿ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ, ಮರಳಿ ನರಜನ್ಮಕ್ಕೆ ಬಾರದಂತೆ ವರವನ್ನು ಕರುಣಿಸಲು ಪ್ರಾರ್ಥಿಸಿದರು. ನಿನಗೆ ಸದಾಕಾಲ ನನ್ನ ದರ್ಶನ ಭಾಗ್ಯವಿದೆ ಎಂದು ಸಂಗಮನಾಥನು ಹಡಪದ ಅಪ್ಪಣ್ಣನವರಿಗೆ ಹೇಳಿ ಅಂತರ್ಧಾನನಾದನು. ಈ ದಂತಕಥೆ ಎಲ್ಲೆಡೆ ಪ್ರಚಾರ ಪಡೆದು ಹಡಪದ ಅಪ್ಪಣ್ಣನವರಿಗೆ ಸಂಗಮೇಶ್ವರದ ಅಪ್ಪಣ್ಣ ಎಂದು ಜನ ಕರೆದಿರಬಹುದು. ಇಂತಹ ಎಲ್ಲ ತರ್ಕಗಳ ಆಧಾರದ ಮೇಲೆ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಒಬ್ಬರೇ ಎಂಬ ನಿರ್ಧಾರಕ್ಕೆ ಬರಬಹುದಾಗಿದೆ. ಇಂಥ ಪ್ರಸಿದ್ಧಿಯ ಕಾರಣದಿಂದಲೇ ಅಲ್ಲಮಪ್ರಭುಗಳು ಅಪ್ಪಣ್ಣನವರನ್ನು ‘ಸಂಗಮೇಶ್ವರದ ಅಪ್ಪಣ್ಣ’ ಎಂದು ಕರೆದಿರಬಹುದು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News