ಕೋವಿಡ್ ಕೆಟ್ಟ ನಿರ್ವಹಣೆ ಕುರಿತು ವಿಚಾರಣೆಗಾಗಿ ಆಯೋಗ ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

Update: 2020-08-12 15:00 GMT

ಹೊಸದಿಲ್ಲಿ,ಆ.12: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕೆಟ್ಟ ನಿರ್ವಹಣೆಯ ಕುರಿತು ವಿಚಾರಣೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ನೇಮಿಸಲು ಕೇಂದ್ರಕ್ಕೆ ನಿರ್ದೇಶ ನೀಡುವಂತೆ ಕೋರಿ ನಿವೃತ್ತ ಸರಕಾರಿ ಅಧಿಕಾರಿಗಳು ಸೇರಿದಂತೆ ಆರು ಜನರು ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾ.ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು ಆ.14ರಂದು ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಿದೆ.

ಕೊರೋನ ವೈರಸ್ ಪ್ರಸರಣವನ್ನು ತಡೆಯುವಲ್ಲಿ ಸಕಾಲಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸರಕಾರವು ವಿಫಲಗೊಂಡಿತ್ತು ಎಂದು ಆರೋಪಿಸಿರುವ ಅರ್ಜಿಯು,ಲೋಪಗಳ ಕುರಿತು ವಿಚಾರಣೆ ನಡೆಸಲು ಸ್ವತಂತ್ರ ಆಯೋಗವೊಂದರ ನೇಮಕವು ಅಗತ್ಯವಾಗಿದೆ ಎಂದು ಹೇಳಿದೆ.

 ಮಾ.25ರಿಂದ ಹೇರಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ ಮತ್ತು ಅದನ್ನು ಅನುಷ್ಠಾನಿಸಿದ ರೀತಿಯು ಉದ್ಯೋಗಗಳು, ಜೀವನೋಪಾಯ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮವನ್ನುಂಟು ಮಾಡಿತ್ತು. ಲಾಕ್‌ಡೌನ್ ಕ್ರಮವು ನಿರಂಕುಶ ಮತ್ತು ತರ್ಕಬಾಹಿರವಾಗಿತ್ತು ಮತ್ತು ತಜ್ಞರು ಅಥವಾ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸದೆ ಅದನ್ನು ಜಾರಿಗೊಳಿಸಲಾಗಿತ್ತು. ವಿಶ್ವದಲ್ಲಿಯೇ ಅತ್ಯಂತ ಕಠಿಣ ಮತ್ತು ನಿರ್ಬಂಧಿತ ಲಾಕಡೌನ್ ಆಗಿತ್ತಾದರೂ ವೈರಸ್ ಹರಡುವಿಕೆಯನ್ನು ನಿಲ್ಲಿಸುವಲ್ಲಿ ಅದು ವಿಫಲಗೊಂಡಿತ್ತು ಎಂದು ಹೇಳಿರುವ ಅರ್ಜಿಯು, ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಅನುಭವಿಸಿದ್ದ ಸಂಕಷ್ಟಗಳನ್ನೂ ಪ್ರಸ್ತಾಪಿಸಿದೆ.

ವಿಪತ್ತು ನಿರ್ವಹಣೆ ಕಾಯ್ದೆ 2005ರಡಿ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಲು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಕನಿಷ್ಠ ಪರಿಹಾರವನ್ನೊದಗಿಸಲು ಮಾರ್ಗಸೂಚಿಗಳನ್ನು ಹೊರಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು ಎಂದು ಆರೋಪಿಸಿರುವ ಅರ್ಜಿಯು,ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಪಿಪಿಇ ಕಿಟ್‌ಗಳನ್ನು ಒದಗಿಸುವಲ್ಲಿಯೂ ವಿಳಂಬವಾಗಿತ್ತು ಎಂದು ಬೆಟ್ಟು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷದ ಜನವರಿ ಆರಂಭದಲ್ಲಿಯೇ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಮಾಹಿತಿ ನೀಡಿದ್ದರೂ ವೈರಸ್ ಪ್ರಸರಣವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರವು ವಿಫಲಗೊಂಡಿತ್ತು ಎಂದೂ ಅರ್ಜಿದಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News