ರಾಜಸ್ಥಾನ:ವಿಶ್ವಾಸಮತ ಗೆದ್ದ ಅಶೋಕ್ ಗೆಹ್ಲೋಟ್ ಸರಕಾರ

Update: 2020-08-14 15:36 GMT

ಜೈಪುರ,ಆ.14: ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರವು ಶುಕ್ರವಾರ ಆರಂಭಗೊಂಡ ರಾಜಸ್ಥಾನ ವಿಧಾನಸಭಾ ಅಧಿವೇಶನದಲ್ಲಿ ನಿರೀಕ್ಷೆಯಂತೆಯೇ ವಿಶ್ವಾಸಮತವನ್ನು ಗೆದ್ದುಕೊಂಡಿದೆ. ಇದರೊಂದಿಗೆ ಅವರ ಸರಕಾರವನ್ನು ಪತನದ ಅಂಚಿಗೆ ತಳ್ಳಿದ್ದ,ಬಂಡುಕೋರರು ಸೃಷ್ಟಿಸಿದ್ದ ವಾರಗಳ ಕಾಲದ ಬಿಕ್ಕಟ್ಟಿಗೆ ಅಂತಿಮ ತೆರೆ ಬಿದ್ದಿದೆ.

ಸೋಮವಾರ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಮುಖ್ಯಮಂತ್ರಿಗಳ ವಿರುದ್ಧದ ತನ್ನ ಗುಂಪಿನ ಬಂಡಾಯಕ್ಕೆ ಅಂತ್ಯ ಹಾಡಿದ್ದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗೆ ಗೆಹ್ಲೋಟ್ ಗುರುವಾರ ರಾಜಿ ಮಾಡಿಕೊಂಡಿದ್ದ ಬೆನ್ನಲ್ಲೇ ಸರಕಾರವು ವಿಶ್ವಾಸಮತವನ್ನು ಯಾಚಿಸಿತ್ತು. ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಗೊಳಿಸುವ ಮೂಲಕ ತನ್ನ ಸರಕಾರಕ್ಕೆ ಇನ್ನು ಆರು ತಿಂಗಳ ಕಾಲ ಯಾವುದೇ ಸವಾಲು ಎದುರಾಗದಂತೆ ನೋಡಿಕೊಳ್ಳುವಲ್ಲಿ ಗೆಹ್ಲೋಟ್ ಯಶಸ್ವಿಯಾಗಿದ್ದಾರೆ.

ವಿಶ್ವಾಸಮತ ಕುರಿತು ಸಂಕ್ಷಿಪ್ತ ಚರ್ಚೆಯಲ್ಲಿ ಪೈಲಟ್ ಮಧ್ಯಪ್ರವೇಶ ಎಲ್ಲರ ಗಮನ ಸೆಳೆದಿತ್ತು. ಉಪ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ವಜಾಗೊಳಿಸಿರುವುದರಿಂದ ಸದನದಲ್ಲಿ ಅವರ ಆಸನವೂ ಬದಲಾಗಿದ್ದು,ಸರಕಾರಿ ಆಸನಗಳಿಗಿಂತ ಪ್ರತಿಪಕ್ಷದ ಆಸನಕ್ಕೆ ಹೆಚ್ಚು ಸಮೀಪ ಅವರಿಗೆ ಆಸನವನ್ನು ನೀಡಲಾಗಿದೆ ‘ಈಗ ನಾನು ಪ್ರತಿಪಕ್ಷದ ಸಮೀಪದಲ್ಲಿದ್ದೇನೆ. ನನ್ನನ್ನು ಗಡಿಗೆ ಕಳುಹಿಸಲಾಗಿದೆ. ಏಕೆಂದರೆ ಅತ್ಯಂತ ಶೂರರನ್ನು ಮತ್ತು ಬಲಶಾಲಿಗಳನ್ನು ಮಾತ್ರ ಗಡಿಗೆ ಕಳುಹಿಸಲಾಗುತ್ತದೆ ’ ಎಂದು ಬಿಜೆಪಿಯ ಟೀಕೆಗಳಿಗೆ ಉತ್ತರಿಸುತ್ತ ಪೈಲಟ್ ಹೇಳಿದರು.

ಪೈಲಟ್ ಬಂಡೆದಿದ್ದ ಸಂದರ್ಭದಲ್ಲಿ,ಶಾಸಕರನ್ನು ಖರೀದಿಸುವ ಮೂಲಕ ತನ್ನ ಸರಕಾರವನ್ನು ಉರುಳಿಸಲು ಅವರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದರು.

‘ವಿಶ್ವಾಸಮತ ಗೆಲುವು ಎಲ್ಲ ಶಂಕೆಗಳಿಗೆ ಅಂತ್ಯ ಹಾಡಿದೆ. ನಾವು ಎತ್ತಿದ್ದ ಎಲ್ಲ ವಿಷಯಗಳಿಗೆ ಮಾರ್ಗಸೂಚಿಯೊಂದನ್ನು ಸಿದ್ಧಗೊಳಿಸಲಾಗಿದೆ. ಸಕಾಲಕ್ಕೆ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ’ ಎಂದು ವಿಶ್ವಾಸಮತದ ಬಳಿಕ ಪೈಲಟ್ ಹೇಳಿದರು.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಸದಸ್ಯರು ಅಗತ್ಯವಾಗಿದ್ದರೆ ಗೆಹ್ಲೋಟ್ 125 ಶಾಸಕರ ಬೆಂಬಲವನ್ನು ಹೊಂದಿದ್ದರು. ಬಂಡುಕೋರರು ಪಕ್ಷಕ್ಕೆ ಮರಳುವ ಮುನ್ನ ಈ ಬೆಂಬಲ 102ಕ್ಕೆ ಇಳಿದಿತ್ತು. ಬಿಜೆಪಿ 75 ಸದಸ್ಯರನ್ನು ಹೊಂದಿದ್ದು ಸದನದಲ್ಲಿ ಗೆಹ್ಲೋಟ್ ಅವರಿಗೆ ಸವಾಲೆಸೆಯಲು ಇದು ಸಾಕಾಗುವುದಿಲ್ಲ. ತಾನು ವಿಶ್ವಾಸಮತ ನಿರ್ಣಯವನ್ನು ಮಂಡಿಸುವುದಾಗಿ ಮೊದಲು ಪ್ರಕಟಿಸಿದ್ದ ಬಿಜೆಪಿ ನಂತರ ಅದನ್ನು ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News