ಅಧಿಕಾರದಲ್ಲಿ ಕುಳಿತವರು ಚೀನಾದ ಹೆಸರೆತ್ತಲು ಹೆದರುವುದೇಕೆ? ಕಾಂಗ್ರೆಸ್ ಪ್ರಶ್ನೆ

Update: 2020-08-15 09:30 GMT

ಹೊಸದಿಲ್ಲಿ, ಆ.15: ಅಧಿಕಾರದ ಗದ್ದುಗೆಯಲ್ಲಿ ಕುಳಿತವರು ಭಾರತದ ಭೂ ಪ್ರದೇಶದೊಳಗೆ ಪ್ರವೇಶಿಸಿರುವ ಚೀನಾದ ಹೆಸರನ್ನು ಹೇಳಲು ಹೆದರುತ್ತಿರುವುದೇಕೆ?ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪ್ರತಿ ಭಾರತೀಯ ನಾಗರಿಕ ಸಶಸ್ತ್ರ ಪಡೆಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, "ದೇಶವನ್ನು ರಕ್ಷಿಸಲು ಹಾಗೂ ಚೀನಾವನ್ನು ಹಿಂದಕ್ಕೆ ತಳ್ಳಲು ನೀವೇನು ಮಾಡಿದ್ದೀರಿ ಎಂದು ಸ್ವಾತಂತ್ರ ದಿನವಾದ ಇಂದು ಎಲ್ಲ ಭಾರತೀಯರು ಕೇಂದ್ರ ಸರಕಾರವನ್ನು ಪ್ರಶ್ನಿಸಬೇಕಾಗಿದೆ'' ಎಂದರು.

ಕೆಂಪುಕೋಟೆಯಲ್ಲಿ ನಿಂತು ಮಾತನಾಡಿದ ಪ್ರಧಾನಿ ಮೋದಿ, "ಎಲ್‌ಒಸಿಯಿಂದ ಎಲ್‌ಎಸಿ ತನಕ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವವರಿಗೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ದೇಶದ ಸಾರ್ವಭೌಮತ್ವ ರಕ್ಷಿಸಲು ಎಲ್ಲ ಭಾರತೀಯರು ಒಗ್ಗಟ್ಟಾಗಿದ್ದಾರೆ'' ಎಂದು ಪಾಕ್ ಹಾಗೂ ಚೀನಾದ ಹೆಸರೆತ್ತದೆ ಹೇಳಿದ್ದರು.

"ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಎಲ್ಲ 130 ಕೋಟಿ ಭಾರತೀಯ ಪ್ರಜೆಗಳು ನಮ್ಮ ಸಶಸ್ತ್ರ ಪಡೆಗಳ ಕುರಿತು ಹೆಮ್ಮೆ ಪಡುತ್ತಿದ್ದಾರೆ. ಅವರ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿದ್ದಾರೆ. ಚೀನಾ ದಾಳಿಗೆ ಮುಂದಾದಾಗಲೆಲ್ಲಾ ಭಾರತೀಯ ಸೇನೆ ಪ್ರತಿಬಾರಿ ತಕ್ಕ ಉತ್ತರ ನೀಡಿದೆ. ಆದರೆ, ಅಧಿಕಾರದಲ್ಲಿರುವವರು ಚೀನಾದ ಹೆಸರನ್ನು ಹೇಳಲು ಏಕೆ ಹೆದರುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ'' ಎಂದು ಸುರ್ಜೆವಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News