ಸ್ಪೆಕ್ಟ್ರಂ ಬಳಸುವ ನೀವು ಎಜಿಆರ್ ಬಾಕಿ ಉಳಿಸಿಕೊಂಡದ್ದೇಕೆ: ಜಿಯೋಗೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2020-08-15 09:55 GMT

ನವದೆಹಲಿ:  ರಿಲಯನ್ಸ್ ಕಮ್ಯುನಿಕೇಶನ್ಸ್‍ನ ಸ್ಪೆಕ್ಟ್ರಂ ಅನ್ನು  ರಿಲಯನ್ಸ್ ಜಿಯೋ 2016ರಿಂದ ಬಳಸುತ್ತಿದೆಯೆಂದಾದಲ್ಲಿ ಆ ಸಂಸ್ಥೆಯ ಎಜಿಆರ್ ಬಾಕಿಯನ್ನು ರಿಲಯನ್ಸ್ ಜಿಯೋ ಪಾವತಿಸಬೇಕೆಂದು  ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ಶುಕ್ರವಾರ ಹೇಳಿದೆ.

"ರಿಲಯನ್ಸ್ ಕಮ್ಯುನಿಕೇಶನ್ಸ್‍ನ ಸ್ಪೆಕ್ಟ್ರಂ ಅನ್ನು ರಿಲಯನ್ಸ್ ಜಿಯೋ ಬಳಸುತ್ತಿದೆಯೇ? ಹಾಗಾದರೆ ಯಾವಾಗಿನಿಂದ?'' ಎಂದು ಪೀಠ ರಿಲಯನ್ಸ್ ಕಮ್ಯುನಿಕೇಶನ್ಸ್‍ನ ವಕೀಲ ಶ್ಯಾಮ್ ದಿವಾನ್ ಅವರನ್ನು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿದ ಅವರು ಸ್ಪೆಕ್ಟ್ರಂನ ಒಂದು ಭಾಗ ಬಳಕೆಯಾಗದೆ ಬಾಕಿಯಾಗಿದ್ದರೆ ಇನ್ನೊಂದು ಭಾಗವನ್ನು 2016ರ ಒಪ್ಪಂದದಂತೆ ರಿಲಯನ್ಸ್ ಜಿಯೋ ಜತೆಗೆ  ಶೇರ್ ಮಾಡಲಾಗಿದೆ ಎಂದು ಹೇಳಿದರು.

"ಹೀಗಿರುವಾಗ ಎಜಿಆರ್ ಬಾಕಿಗಳನ್ನು ಪಾವತಿಸುವ ಬಾಧ್ಯತೆಯನ್ನು ಹೇಗೆ ತಪ್ಪಿಸಿಕೊಳ್ಳುತ್ತೀರಿ. ನಿಮ್ಮನ್ನು ಹಿಡಿದು ಪಾವತಿಸುವಂತೆ ಮಾಡುತ್ತೇವೆ. ಸ್ಪೆಕ್ಟ್ರಂ ಬಳಸುವವರು ಹಣ ಪಾವತಿಸಬೇಕು,'' ಎಂದು ನ್ಯಾಯಾಲಯ ಹೇಳಿದೆ.

ಈ ಸಂದರ್ಭ ಹಾಜರಿದ್ದ ರಿಲಯನ್ಸ್ ಜಿಯೋ ವಕೀಲರಾದ ಕೆ ವಿ ವಿಶ್ವನಾಥನ್ ತಮ್ಮ ವಾದ ಮಂಡಿಸುತ್ತಾ "ಸ್ಪೆಕ್ಟ್ರಂ ಟ್ರೇಡಿಂಗ್ ಮತ್ತು ಶೇರಿಂಗ್ ಎರಡೂ ಭಿನ್ನವಾಗಿದ್ದು ಶೇರಿಂಗ್ ಮಾಡಿದಾಗ ಸ್ಪೆಕ್ಟ್ರಂ ಬಳಕೆ ಶುಲ್ಕ ಮಾತ್ರ ಪಾವತಿಸಬೇಕಿದೆ,'' ಎಂದರು.

ರಿಲಯನ್ಸ್ ಜಿಯೋ ತನ್ನ ಎಜಿಆರ್ ಬಾಕಿ ಮೊತ್ತ ರೂ. 195 ಕೋಟಿ ಪಾವತಿಸಿದ್ದರೆ ರಿಲಯನ್ಸ್ ಕಮ್ಯುನಿಕೇಶನ್ಸ್ ಸರಕಾರಕ್ಕೆ ರೂ. 31,000 ಕೋಟಿ ಬಾಕಿಯಿರಿಸಿದೆ.

ದಿವಾಳಿತನ ಕಾನೂನು (ಐಬಿಸಿ) ಕೋಡ್ ಅನ್ವಯ ಕೆಲ ಟೆಲಿಕಾಂ ಕಂಪೆನಿಗಳು  ನೀಡಿರುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಪರಾಮರ್ಶಿಸುತ್ತಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಏರ್ ಸೆಲ್ ಹಾಗೂ ವೀಡಿಯೋಕಾನ್ ಕಂಪೆನಿಗಳ ಸ್ಪೆಕ್ಟ್ರಂ ಅನ್ನು ಯಾರು ಬಳಸುತ್ತಿದ್ದರೆಂಬ ಕುರಿತಾದ ಮಾಹಿತಿಯನ್ನೂ  ಸುಪ್ರೀಂ ಕೋರ್ಟ್ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News