ಇಡುಕ್ಕಿ ಭೂಕುಸಿತ: ಎರಡು ವರ್ಷದ ಬಾಲಕಿಯ ಮೃತದೇಹ ಪತ್ತೆ ಹಚ್ಚಿದ ನಾಯಿ

Update: 2020-08-15 14:40 GMT

ಇಡುಕ್ಕಿ:  ಇತ್ತೀಚೆಗೆ ಸುರಿದ ಭಾರೀ ಮಳೆ ಸಂದರ್ಭ ಇಡುಕ್ಕಿಯ ರಾಜಾಮಲೈ ಬೆಟ್ಟದ ಸಮೀಪ ಸಂಭವಿಸಿದ ಭೂಕುಸಿತದ ಅವಶೇಷಗಳೆಡೆಯಲ್ಲಿ ಎರಡು ವರ್ಷದ ಬಾಲಕಿ  ಧನುಷ್ಕಾಳ ಮೃತದೇಹ ದೊರಕಿದೆ.

ಧನುಷ್ಕಾಳ ಮೃತದೇಹ ಹುಡುಕಲು ಕೂವಿ ಎಂಬ ನಾಯಿ ನೆರವಾಗಿದೆ. ಭೂಕುಸಿತ ಸಂಭವಿಸಿದಂದಿನಿಂದ ಕೂವಿ ಮತ್ತಿತರ ಎರಡು ನಾಯಿಗಳು ಅದೇ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ತಮ್ಮ ಪ್ರೀತಿಯ ಮಾಲಕರು ಹಾಗೂ ಮನೆಯನ್ನು ಹುಡುಕುತ್ತಿವೆ.

“ಧನುಷ್ಕಾಳ ಮೃತದೇಹ ದೊರಕುವಾಗ ನಾನು ಸ್ಥಳದಲ್ಲಿದ್ದೆ. ನಾಯಿ ಬಹಳ ಕಳವಳಗೊಂಡಂತಿತ್ತು.  ಅಲ್ಲಿನ ಸೆಮೆಟ್ ಸೇತುವೆ  ಅಡಿ ಭಾಗದ ಒಂದು ಮರದ ಸಮೀಪ ಮೃತದೇಹವು  ಪೆಟ್ಟಿಮುಡಿ ಕಡೆ  ಹರಿಯುವ ನದಿಯಲ್ಲಿತ್ತು. ನಾಯಿ ವಾಸನೆ ಹಿಡಿದು ಅತ್ತ ಧಾವಿಸಿ ಆಕೆಯ ಮೃತದೇಹ ಪತ್ತೆ ಹಚ್ಚಲು ಸಹಾಯ ಮಾಡಿತು'' ಎಂದು ಇಡುಕ್ಕಿ ಸಂಸದ ಡೀನ್ ಕುರಿಯಾಕೋಸ್ ಹೇಳಿದ್ದಾರೆ.

ನದಿ ನೀರನ್ನೇ ದಿಟ್ಟಿಸಿ ನೋಡುತ್ತಿದ್ದ ಕೂವಿ ಮೃತದೇಹ ಕಾಣುತ್ತಿದ್ದಂತೆಯೇ ಬೊಗಳಲು ಆರಂಭಿಸಿದಾಗ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವವರು ಅತ್ತ ಧಾವಿಸಿದ್ದರು.

ಧನುಷ್ಕಾಳ ತಂದೆಯ ಮೃತದೇಹ ಈಗಾಗಲೇ ದೊರಕಿದ್ದರೂ ಆಕೆಯ ತಾಯಿ ಮತ್ತು ಹಿರಿಯ ಸೋದರಿಯ ಮೃತದೇಹಗಳು ಇನ್ನೂ ದೊರಕಿಲ್ಲ.

ಭೂಕುಸಿತದಲ್ಲಿ ಸುಮಾರು 70 ಜನರು ಕಾಣೆಯಾಗಿದ್ದಾರೆಂದು ಹೇಳಲಾಗಿದ್ದು, ಇಲ್ಲಿಯ ತನಕ ಸುಮಾರು 11 ಮಕ್ಕಳ ಸಹಿತ 55 ಮಂದಿಯ ಮೃತದೇಹಗಳು ದೊರಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News