ಉತ್ತರ ಪ್ರದೇಶ: ದಲಿತ ಗ್ರಾಮ ಪಂಚಾಯತ್ ಮುಖ್ಯಸ್ಥನ ಹತ್ಯೆ; ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ

Update: 2020-08-15 13:19 GMT

ಲಕ್ನೋ: ಉತ್ತರ ಪ್ರದೇಶದ ಆಝಂಘರ್ ಎಂಬಲ್ಲಿನ ಬನ್ಸ್ ಗಾಂವ್ ಪ್ರದೇಶದಲ್ಲಿ ದಲಿತ ಗ್ರಾಮ ಪಂಚಾಯತ್ ಮುಖ್ಯಸ್ಥನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ಹತ್ಯೆಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿ ಕಲ್ಲು ತೂರಾಟ ಹಾಗೂ ಪೊಲೀಸ್ ಚೆಕ್ ಪೋಸ್ಟ್ ‍ನಲ್ಲಿ ದಾಂಧಲೆ ನಡೆದಿದೆ.

ಪ್ರತಿಭಟನೆ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಹದಿಹರೆಯದ ಯುವಕನೊಬ್ಬ ಬಲಿಯಾಗಿದ್ದಾನೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆಯಾದರೂ ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದೆ.

ಗ್ರಾಮ ಪಂಚಾಯತ್ ಮುಖ್ಯಸ್ಥ ಸತ್ಯಮೇವ ಜಯತೇ ಅಲಿಯಾಸ್ ಪಪ್ಪು ರಾಮ್ ಎಂಬಾತನನ್ನು ಆತನ ಸ್ನೇಹಿತರಾದ ವಿವೇಕ್ ಸಿಂಗ್ ಹಾಗೂ ಸೂರ್ಯಾಂಶ್ ದುಬೆ  ಔತಣವಿದೆಯೆಂದು ಕರೆದು ನಂತರ ಜಗಳಕ್ಕಿಳಿದು ಗುಂಡಿಕ್ಕಿ ಸಾಯಿಸಿ ಪರಾರಿಯಾಗಿದ್ದರು.

ಘಟನೆಯ ಕುರಿತಂತೆ ತಮ್ಮ ನೋವು ವ್ಯಕ್ತಪಡಿಸಿದ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ರಾಜ್ಯದ ಆದಿತ್ಯನಾಥ್ ಸರಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ. “ಇಂತಹ ಘಟನೆಗಳು  ಈ ಹಿಂದಿನಂತೆಯೇ ನಡೆದರೆ ಸಮಾಜವಾದಿ ಪಕ್ಷದ ಸರಕಾರ  ಹಾಗೂ ಬಿಜೆಪಿ ಸರಕಾರದ ನಡುವೆ ವ್ಯತ್ಯಾಸವೇನಿದೆ?'' ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News