5 ಕೋಟಿ ಮಹಿಳೆಯರಿಗೆ 1 ರೂ. ದರದಲ್ಲಿ ಸ್ಯಾನಿಟರಿ ಪ್ಯಾಡ್: ಪ್ರಧಾನಿಯ ಹೇಳಿಕೆಗೆ ವ್ಯಾಪಕ ಪ್ರಶಂಸೆ

Update: 2020-08-15 13:59 GMT

ಹೊಸದಿಲ್ಲಿ : ಇಂದಿನ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಸುಮಾರು ಐದು ಕೋಟಿ ಮಹಿಳೆಯರಿಗೆ 1 ರೂ. ದರದಲ್ಲಿ ಸ್ಯಾನಿಟರಿ ಪ್ಯಾಡ್‍ ಗಳು ದೊರಕಿವೆ ಎಂದರು.

“ಭಾರತದ ಪುತ್ರಿಯರು ಹಾಗೂ ಸೋದರಿಯರ ಆರೋಗ್ಯದ ಕುರಿತಂತೆ ಸರಕಾರಕ್ಕೆ ಸದಾ ಕಾಳಜಿಯಿದೆ.  ದೇಶದಲ್ಲಿರುವ  6,000 ಜನೌಷಧಿ ಕೇಂದ್ರಗಳ ಮುಖಾಂತರ ಸುಮಾರು ಐದು ಕೋಟಿ ಮಹಿಳೆಯರು 1 ರೂ. ದರದಲ್ಲಿ ಸ್ಯಾನಿಟರಿ ಪ್ಯಾಡ್‍ ಗಳನ್ನು ಪಡೆದಿದ್ದಾರೆ'' ಎಂದು ಮೋದಿ ಹೇಳಿದರು.

“ಸ್ಯಾನಿಟರಿ ಪ್ಯಾಡ್ ಮಾರಾಟ ಮೂಲಕ ದೊರಕಿದ ಹಣವನ್ನು ಭಾರತದ ‘ಪುತ್ರಿಯರು ಮತ್ತು ಸೋದರಿಯರ' ವಿವಾಹಗಳಿಗೆ ರಚಿಸಲಾದ ಸಮಿತಿಗಳು ಸೂಕ್ತ ಸಮಯದಲ್ಲಿ ಬಳಕೆ ಮಾಡಲಿವೆ'' ಎಂದೂ ಹೇಳಿದ ಪ್ರಧಾನಿ, ``ನಾವು ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ್ದೇವೆ. ನೌಕಾ ದಳ ಮತ್ತು ವಾಯುಸೇನೆಯಲ್ಲಿ ಮಹಿಳೆಯರಿಗೆ ಯುದ್ಧ ಕಾರ್ಯಾಚರಣೆ  ಕರ್ತವ್ಯವೂ ದೊರಕುತ್ತಿದೆ, ಮಹಿಳೆಯರು ಈಗ ನಾಯಕಿಯರು, ನಾವು ತ್ರಿವಳಿ ತಲಾಖ್ ನಿಷೇಧಿಸಿದ್ದೇವೆ'' ಎಂದು ಹೇಳಿದರು.

ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಈ ವಿಚಾರ ಪ್ರಸ್ತಾಪಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News