ಬಿಜೆಪಿ ಕಾರ್ಯಕರ್ತನ ಹತ್ಯೆ: ಪಶ್ಚಿಮಬಂಗಾಳದ ಖನಕುಲ್ ಉದ್ವಿಗ್ನ

Update: 2020-08-15 17:18 GMT
photo: indianexpress.com

ಕೋಲ್ಕತ್ತಾ, ಆ. 15: ಸ್ವಾತಂತ್ರ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜ ಆರೋಹಣದ ಕುರಿತು ನಡೆದ ಸಂಘರ್ಷದಲ್ಲಿ ಬಿಜೆಪಿಯ ಕಾರ್ಯಕರ್ತನೋರ್ವನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಬಳಿಕ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯ ಖನಕುಲ್ ಪ್ರದೇಶದಲ್ಲಿ ಶನಿವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತಪಟ್ಟ ಕಾರ್ಯಕರ್ತನನ್ನು ಸುದರ್ಶನ್ ಪ್ರಾಮಾಣಿಕ್ (40) ಎಂದು ಗುರುತಿಸಲಾಗಿದೆ.

ತಮ್ಮ ಪಕ್ಷದ ಕಾರ್ಯಕರ್ತ ಸುದರ್ಶನ್ ಪ್ರಾಮಾಣಿಕ್ ಅವರ ಸಾವನ್ನು ಖಂಡಿಸಿ ಪಶ್ಚಿಮಬಂಗಾಳ ಬಿಜೆಪಿ 12 ಗಂಟೆಗಳ ಬಂದ್ ಘೋಷಿಸಿದೆ. ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಅದು ಆಗ್ರಹಿಸಿದೆ.

ಪ್ರಾಮಾಣಿಕ್ ಅವರನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಗೈದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ.

‘‘ಖನಕುಲ್‌ನಲ್ಲಿ ಘರ್ಷಣೆ ಆರಂಭವಾಗಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ’’ ಎಂದು ಎಸ್‌ಪಿ ತಥಾಗತ ಬಸು ಹೇಳಿದ್ದಾರೆ.

ಎರಡು ಗುಂಪು ಒಂದೇ ಪ್ರದೇಶದಲ್ಲಿ ಧ್ವಜಾರೋಹಣ ಮಾಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಘರ್ಷಣೆ ಉಂಟಾಯಿತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿದೆ. 8 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News