×
Ad

ದೂರು ನೀಡಿದ ದಿಲ್ಲಿ ಗಲಭೆ ಸಂತ್ರಸ್ತರಿಗೆ ಹಲ್ಲೆ, ಕಿರುಕುಳ ಆರೋಪ: ವರದಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ

Update: 2020-08-20 19:54 IST

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಆಗಸ್ಟ್ 5ರಂದು ನಡೆದ ಕೆಲ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ದೂರು ನೀಡಲು ತೆರಳಿದ್ದ ವೇಳೆ ಭಜನಪುರ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿತ್ತು ಹಾಗೂ ಪುತ್ರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಶನ್ನೋ ಎಂಬ ಮಹಿಳೆ ಸಲ್ಲಿಸಿದ ಅಪೀಲಿನ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದಿಲ್ಲಿ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ಸೂಚಿಸಿದೆ.

ಆಗಸ್ಟ್ 5ರಂದು ರಾಮ ಮಂದಿರ ಭೂಮಿ ಪೂಜೆ ದಿನ ಈಶಾನ್ಯ ದಿಲ್ಲಿಯ ಸುಭಾಶ್ ಮೊಹಲ್ಲಾದಲ್ಲಿ ಮಸೀದಿ ಸಮೀಪದ ಗೇಟುಗಳಲ್ಲಿ ಕೇಸರಿ ಧ್ವಜ ಹಾರಾಡಿದ್ದರಿಂದ ಉದ್ವಿಗ್ನತೆಗೆ ಸೃಷ್ಟಿಯಾಗಿತ್ತು. ಅಲ್ಲಿ ರಾತ್ರಿ ಹೊತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನೂ ಕೂಗಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದರು.

ಈ ಸಂಬಂಧ ಆಗಸ್ಟ್ 8ರಂದು ಸುಭಾಶ್ ಮೊಹಲ್ಲಾದ ಸುಮಾರು ಏಳು ಮುಸ್ಲಿಂ ಮಹಿಳೆಯರು ದೂರು ನೀಡಲೆಂದು ಭಜನಪುರ ಪೊಲೀಸ್ ಠಾಣೆಗೆ ಹೋಗಿದ್ದರು. ಇವರ ಪೈಕಿ ಶನ್ನೊ ಮತ್ತವರ ಪುತ್ರಿಯೂ ಇದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿ ಅದನ್ನು ಹರಿದು ಹಾಕಿ, ಸತತವಾಗಿ ತನ್ನ ಕೆನ್ನೆಗೆ ಬಾರಿಸಿದ್ದರು ಹಾಗೂ ಎದೆ ಮೇಲೆ ಕೈಹಾಕಿ ಕುರ್ತಾ ಹರಿದರು ಎಂದು ಶನ್ನೋ ಆರೋಪಿಸಿದ್ದಾರೆ. ತನ್ನ ಪುತ್ರಿ ಹಾಗೂ ಇತರರ ಮೇಲೂ ದೌರ್ಜನ್ಯ ನಡೆದಿದೆ ಎಂದು ಆಕೆ ದೂರಿದ್ದಾಳೆ.

ಆದರೆ ಭಜನಪುರ ಪೊಲೀಸರು ಈ ಆರೋಪ ನಿರಾಕರಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಶನ್ನೋ ಬಿಜೆಪಿ ನಾಯಕ ಜಗದೀಶ್ ಪ್ರಧಾನ್ ಸಹಿತ ಹಲವರ ವಿರುದ್ಧ  ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಜುಲೈ 17ರಂದು ದಿಲ್ಲಿ ಹೈಕೋರ್ಟ್ ಆಕೆಯ ಕುಟುಂಬ ಎದುರಿಸುತ್ತಿರುವ ಬೆದರಿಕೆಯನ್ನು ಪರಿಗಣಿಸಿ ರಕ್ಷಣೆ  ನೀಡುವಂತೆ ಸೂಚಿಸಿತ್ತು. ಬುಧವಾರ ಮತ್ತೆ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ಈ ಕುರಿತು ಪರಾಮರ್ಶಿಸುವಂತೆ ತಿಳಿಸಿ ಅಗತ್ಯ ಬಿದ್ದರೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News