×
Ad

ಬಿಡ್ಡಿಂಗ್‌ನಲ್ಲಿ ಕೇರಳ ಅರ್ಹತೆ ಪಡೆದಿರಲಿಲ್ಲ: ಏರ್‌ಪೋರ್ಟ್ ಲೀಸ್ ಕುರಿತು ವಾಯಯಾನ ಸಚಿವ

Update: 2020-08-20 23:41 IST

ತಿರುವನಂತಪುರ,ಆ.20: ತಿರುವನಂತಪುರ ವಿಮಾನ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ 50 ವರ್ಷಗಳ ಅವಧಿಗೆ ಅದಾನಿ ಎಂಟರ್‌ಪ್ರೈಸಸ್‌ಗೆ ಹಸ್ತಾಂತರಿಸುವ ಕೇಂದ್ರಕ್ಕೆ ಕ್ರಮವನ್ನು ಕೇರಳ ಸರಕಾರವು ವಿರೋಧಿಸಿರುವ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು,ತಿರುವನಂತಪುರ ವಿಮಾನ ನಿಲ್ದಾಣಕ್ಕಾಗಿ ನಡೆದಿದ್ದ ಜಾಗತಿಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೇರಳ ಸರಕಾರವು ಅರ್ಹತೆಯನ್ನು ಪಡೆದಿರಲಿಲ್ಲ ಎಂದು ಗುರುವಾರ ಟ್ವೀಟಿಸಿದ್ದಾರೆ.

ತಿರುವನಂತಪುರ ವಿಮಾನ ನಿಲ್ದಾಣವನ್ನು ಖಾಸಗೀಕರಿಸುವ ನಿರ್ಧಾರದ ವಿರುದ್ಧ ಅಭಿಯಾನವೊಂದು ಆರಂಭಗೊಂಡಿದೆ ’ಎಂದು ಹೇಳಿರುವ ಪುರಿ ಬಿಡ್ಡಿಂಗ್‌ನ ಸಂಕೀರ್ಣ ಪ್ರಕ್ರಿಯೆಯನ್ನೂ ವಿವರಿಸಿದ್ದಾರೆ.

ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ)ದ ಬಿಡ್‌ಗೂ ವಿಜೇತ ಬಿಡ್‌ಗೂ ನಡುವಿನ ಅಂತರ ಶೇ.10ರೊಳಗಿದ್ದರೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಕೆಎಸ್‌ಐಡಿಸಿಗೇ ನೀಡುವುದಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ ಬಿಡ್‌ಗಳನ್ನು ತೆರೆದಾಗ ವಿಜೇತ ಬಿಡ್ ಮತ್ತು ಕೆಎಸ್‌ಐಡಿಸಿಯ ಬಿಡ್ ನಡುವೆ ಶೇ.19.64ರಷ್ಟು ವ್ಯತ್ಯಾಸವಿತ್ತು. ಅದಾನಿ ಬಿಡ್‌ನಲ್ಲಿ ಪ್ರತಿ ಪ್ರಯಾಣಿಕನಿಗೆ 168 ರೂ.ಉಲ್ಲೇಖಿಸಿದ್ದರೆ,ಕೆಎಸ್‌ಐಡಿಸಿ 135 ರೂ.ಗಳನ್ನು ಮತ್ತು ಮೂರನೇ ಅರ್ಹ ಬಿಡ್ಡರ್ ಸಂಸ್ಥೆ 63 ರೂ.ಗಳನ್ನು ಉಲ್ಲೇಖಿಸಿತ್ತು. ಹೀಗಾಗಿ ಕೇರಳ ಸರಕಾರಕ್ಕೆ ‘ಮೊದಲ ನಿರಾಕರಣೆಯ ಹಕ್ಕಿನ’ ವಿಶೇಷ ಸೌಲಭ್ಯವನ್ನು ನೀಡಲಾಗಿತ್ತಾದರೂ ಪಾರದರ್ಶಕವಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅದು ಅರ್ಹತೆಯನ್ನು ಪಡೆದುಕೊಂಡಿರಲಿಲ್ಲ. ನಂತರ ಕೇರಳ ಸರಕಾರವು ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಮೆಟ್ಟಿಲುಗಳನ್ನೇರಿತ್ತು. ಈ ಎಲ್ಲ ವಾಸ್ತವಾಂಶಗಳು ಬಹಿರಂಗವಾಗಿ ಲಭ್ಯವಿವೆ ಎಂದು ಪುರಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್ ಮತ್ತು ಕೇರಳದ ಎಡರಂಗ ವಿರೋಧಿಸಿವೆ.

ರಾಜ್ಯಸರಕಾರವು ಪ್ರಮುಖ ಪಾಲು ಬಂಡವಾಳವನ್ನು ಹೊಂದಿರುವ ’ವಿಶೇಷ ಉದ್ದೇಶ ವ್ಯವಸ್ಥೆ ’ಗೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವರ್ಗಾಯಿಸಬೇಕೆಂದು ರಾಜ್ಯವು ಪದೇ ಪದೇ ಮಾಡಿಕೊಂಡಿದ್ದ ಮನವಿಗಳನ್ನು ಕೇಂದ್ರದ ನಿರ್ಧಾರವು ಕಡೆಗಣಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಮುಖೇನ ತಿಳಿಸಿದ್ದಾರೆ.

ತನ್ಮಧ್ಯೆ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News