ಹೈಡ್ರೋಎಲೆಕ್ಟ್ರಿಕ್ ಘಟಕದಲ್ಲಿ ಬೆಂಕಿ ಅವಘಡ: 9 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ

Update: 2020-08-21 15:51 GMT

ಹೈದರಾಬಾದ್,ಆ.21: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ತೆಲಂಗಾಣ ಗಡಿ ಸಮೀಪದ ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಗುರುವಾರ ತಡರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒಂಭತ್ತು ಜನರ ಪೈಕಿ ಆರು ಜನರ ಶವಗಳನ್ನು ರಕ್ಷಣಾ ಅಧಿಕಾರಿಗಳು ಹೊರಕ್ಕೆ ತೆಗೆದಿದ್ದಾರೆ.

 ಸುರಂಗದಡಿಯ ವಿದ್ಯುತ್ ಕೇಂದ್ರದ ಒಂದನೇ ಘಟಕದಲ್ಲಿ ಈ ದುರಂತ ನಡೆದಿದ್ದು,ಇನ್ನೂ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ದೊರಕಿರುವ ಶವಗಳ ಪೈಕಿ ಎರಡು ಸಹಾಯಕ ಇಂಜಿನಿಯರ್‌ಗಳದ್ದಾಗಿವೆ ಎಂದು ನಗರ ಕರ್ನೂಲ್ ಜಿಲ್ಲಾಧಿಕಾರಿ ಎಲ್.ಶರ್ಮಾ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಜಲವಿದ್ಯುತ್ ಯೋಜನೆಯ ಸುರಂಗದಿಂದ ದಟ್ಟವಾದ ಹೊಗೆ ಹೊರಕ್ಕೆ ಬರುತ್ತಿದ್ದು,ಅದರ ತೀವ್ರತೆಯನ್ನು ಕಡಿಮೆ ಮಾಡಲು ರಕ್ಷಣಾ ತಂಡವು ಹೆಣಗಾಡುವಂತಾಗಿತ್ತು.

ಎನ್‌ಡಿಆರ್‌ಎಫ್ ನೇತೃತ್ವದ ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿಗಳೂ ಕೈಜೋಡಿಸಿದ್ದು, ಕಲ್ಲಿದ್ದಲು ಗಣಿಗಳ ಪ್ರದೇಶವಾಗಿರುವ ಸಿಂಗರೇಣಿಯ ಭೂಗತ ಘಟಕಗಳಲ್ಲಿ ಇಂತಹ ಅವಘಡಗಳನ್ನು ನಿರ್ವಹಿಸಿರುವ ತಜ್ಞರ ತಂಡಗಳೂ ಸ್ಥಳದಲ್ಲಿದ್ದವು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಅವಘಡದ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ತನ್ಮಧ್ಯೆ, ರಕ್ಷಣಾ ಕಾರ್ಯಾಚರಣೆಗಳಲ್ಲಿ ತೆಲಂಗಾಣಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 ಗುರುವಾರ ರಾತ್ರಿ 10:30ರ ಸುಮಾರಿಗೆ ಬೆಂಕಿ ಆರಂಭಗೊಂಡಾಗ 20 ಜನರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 11 ಜನರು ಪಾರಾಗುವಲ್ಲಿ ಯಶಸ್ವಿಯಾದರೆ. ಓರ್ವ ಡಿವಿಜನಲ್ ಇಂಜಿನಿಯರ್, ನಾಲ್ವರು ಅಸಿಸ್ಟಂಟ್ ಇಂಜಿನಿಯರ್‌ಗಳು, ಇಬ್ಬರು ಜ್ಯೂನಿಯರ್ ಪ್ಲಾಂಟ್ ಅಟೆಂಡೆಂಟ್‌ಗಳು ಮತ್ತು ಅಮರ ರಾಜಾ ಬ್ಯಾಟರೀಸ್‌ನ ಇಬ್ಬರು ಉದ್ಯೋಗಿಗಳು ಸೇರಿದಂತೆ ಒಂಭತ್ತು ಜನರು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

‘ಬೆಂಕಿ ಆರಂಭಗೊಂಡ ತಕ್ಷಣ ಘಟಕಗಳಲ್ಲಿ ವಿದ್ಯುತ್ ಪ್ರವಹಿಸುವಿಕೆಯನ್ನು ಸ್ಥಗಿತಗೊಳಿಸಲು ಅವರು ಪ್ರಯತ್ನಿಸಿದ್ದರು, ಆದರೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾವು 400 ಕೆವಿ ಇನ್‌ಪುಟ್‌ಅನ್ನು ಪ್ರತ್ಯೇಕಿಸಿದ್ದೆವು ಮತ್ತು ಎಲ್ಲ ಘಟಕಗಳಲ್ಲಿ ವಿದ್ಯುತ್ ಪ್ರವಹಿಸುವಿಕೆ ಸ್ಥಗಿತಗೊಂಡಿತ್ತು ’ಎಂದು ತೆಲಂಗಾಣ ಟ್ರಾನ್ಸ್‌ಕೋ ಸಿಎಂಡಿ ಡಿ.ಪ್ರಭಾಕರ ರಾವ್ ತಿಳಿಸಿದರು.

ಶ್ರೀಶೈಲಂ ಜಲಾಶಯದ ಎಡದಂಡೆಯಲ್ಲಿರುವ ಈ ಭೂಗತ ಜಲವಿದ್ಯುತ್ ಕೇಂದ್ರದಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಯೋಜನಾ ಘಟಕವು ಹಲವಾರು ಮಟ್ಟಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಂಟ್ರೋಲ್ ರೂಮ್‌ನಲ್ಲಿದ್ದವರು ಸುರಕ್ಷಿತವಾಗಿ ಹೊರಗೆ ಬರುವಲ್ಲಿ ಸಫಲರಾಗಿದ್ದರೆ,ಕೆಲಗಿನ ಮಟ್ಟಗಳಲ್ಲಿದ್ದವರಿಗೆ ದಟ್ಟ ಹೊಗೆಯಿಂದಾಗಿ ಪಾರಾಗಲು ಸಾಧ್ಯವಾಗಲಿಲ್ಲ. ವಿದ್ಯುತ್‌ನ್ನು ಸ್ಥಗಿತಗೊಳಿಸಿದ್ದು ಕೂಡ ರಕ್ಷಣಾ ಕಾರ್ಯ ಮತ್ತು ಪಾರಾಗುವ ಯತ್ನಗಳಿಗೆ ತೊಡಕನ್ನುಂಟು ಮಾಡಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.

ಸಚಿವರಾದ ಜಗದೀಶ ರೆಡ್ಡಿ ಮತ್ತು ನಿರಂಜನ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದು,ರಕ್ಷಣಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿದ್ದರು.

ಇದು ಸ್ಥಾವರದಲ್ಲಿ ಇಂತಹ ಮೊದಲ ಅವಘಡವಾಗಿದೆ. ತನಿಖೆಯ ಬಳಿಕವಷ್ಟೇ ಕಾರಣ ಗೊತ್ತಾಗಲಿದೆ ಎಂದು ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News