ಸಾರ್ವತ್ರಿಕ ಚುನಾವಣೆ, ಉಪಚುನಾವಣೆಗೆ ಚು.ಆಯೋಗದಿಂದ ನೂತನ ಮಾರ್ಗಸೂಚಿ ಪ್ರಕಟ

Update: 2020-08-21 16:49 GMT

    ಹೊಸದಿಲ್ಲಿ,ಆ.22: ಕೊರೋನಾ ವೈರಸ್ ಹಾವಳಿಯ ನಡುವೆಯೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳು ಹಾಗೂ ಉಪಚುನಾವಣೆಗಳಿಗೆ ನೂತನ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗವು ಶುಕ್ರವಾರ ಜಾರಿಗೊಳಿಸಿದೆ. ಆ ಪ್ರಕಾರ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರೆಲ್ಲರೂ ಮಾಸ್ಕ್‌ಗಳನ್ನು ಧರಿಸಬೇಕಾಗುತ್ತದೆ ಹಾಗೂ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನು ಆನ್‌ಲೈನ್ ಮೂಲಕವೂ ಸಲ್ಲಿಸಬಹುದಾಗಿದೆ.

     ಹೊಸದಿಲ್ಲಿಯಲ್ಲಿ ಇಂದು ನಡೆದ ಸಭೆಯ ಬಳಿಕ ಚುನಾವಣಾ ಆಯೋಗವು ನೂತನ ಮಾರ್ಗ ಸೂಚಿಯನ್ನು ಪ್ರಕಟಿಸಿದೆ. ರಾಜಕೀಯ ಪಕ್ಷಗಳು ಹಾಗೂ ವಿವಿಧ ವಿವಿಧ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಅಭಿಪ್ರಾಯಗಳನ್ನು ಆಧರಿಸಿ ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆಯೆಂದು ಆಯೋಗವು ತಿಳಿಸಿದೆ.

ದೈಹಿಕ ಅಸಾಮರ್ಥ್ಯದ ವ್ಯಕ್ತಿಗಳು, 80 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು, ಅಧಿಸೂಚಿತ ಅವಶ್ಯಕ ಸೇವೆಗಳಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕೋವಿಡ್-19 ಪಾಸಿಟಿವ್ ರೋಗಿಗಳು ಹಾಗೂ ಸೋಂಕಿನ ಸಾಧ್ಯತೆ ಯಿರುವವರಿಗೂ ಅಂಚೆಮತದಾನದ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ನೂತನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಬಿಹಾರ ವಿಧಾನಸಭೆಗೆ ಶೀಘ್ರದಲ್ಲೇ ನಡೆಯಲಿರುವ ಚುನಾವಣೆಗಾಗಿ ಆಯೋಗವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯು ಸೆಪ್ಟೆಂಬರ್ 20ರೊಳಗೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಬಿಹಾರದಲ್ಲಿ ಅಕ್ಟೋಬರ್-ನವೆಂಬರ್ ನಡುವೆ ಚುನಾವಣೆ ನಡೆಯಲಿದ್ದು, ಆ ರಾಜ್ಯದಲ್ಲಿ ಈವರೆಗೆ 1.15 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 574ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ನೂತನ ಚುನಾವಣಾ ಮಾರ್ಗಸೂಚಿ

1. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅಭ್ಯರ್ಥಿಯ ಜೊತೆಗೆ ಆಗಮಿಸುವ ವ್ಯಕ್ತಿಗಳು ಹಾಗೂ ವಾಹನಗಳ ಸಂಖ್ಯೆಗೂ ಇರುವ ನಿಯಮಾವಳಿಗಳನ್ನು ಕೂಡಾ ಆಯೋಗವು ಪರಿಷ್ಕರಿಸಿದೆ. ನಾಮಪತ್ರದ ಫಾರಂ ಹಾಗೂ ಅಫಿಡವಿಟ್‌ನ್ನು ಆನ್‌ಲೈನ್ ಭರ್ತಿ ಮಾಡಲು ಹಾಗೂ ಸಲ್ಲಿಸುವ ಐಚ್ಛಿಕ ಸೌಲಭ್ಯವನ್ನು ಕೂಡಾ ಆಯೋಗವು ಸೃಷ್ಟಿಸಿದೆ.

 2. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ, ಚುನಾವಣೆಯಲ್ಲಿ ಆನ್‌ಲೈನ್ ಮೂಲಕ ಭದ್ರತಾ ಮೊತ್ತವನ್ನು ಠೇವಣಿಯಿರಿಸುವ ಅವಕಾಶವನ್ನು ಕೂಡಾ ನೀಡಲಾಗಿದೆ.

 3.ಕೊರೋನ ವೈರಸ್ ನಿಯಂತ್ರಣ ಮಾರ್ಗದರ್ಶಿಸೂತ್ರಗಳನ್ನು ಗಮನದಲ್ಲಿರಿಸಿಕೊಂಡು, ಆಯೋಗವು ಮನೆಗೆಮನೆಗೆ ಚುನಾವಣಾ ಪ್ರಚಾರ ನಡೆಸುವ ಅಭ್ಯರ್ಥಿಗಳ ಸಂಖ್ಯೆಯನ್ನು ಐದಕ್ಕೆ ಸೀಮಿತಗೊಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ಜಾರಿಗೊಳಿಸಿದ ಕೋವಿಡ್-19 ನಿಯಂತ್ರಣ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸಭೆ ಹಾಗೂ ರೋಡ್‌ಶೋಗಳನ್ನು ನಡೆಸುವುದಕ್ಕೂ ಅನುಮತಿ ನೀಡಲಾಗಿದೆ.

  ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತರಿಪಡಿಸುವ ಸಲುವಗಿ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೈಗವಸುಗಳು, ಮುಖ ಸುರಕ್ಷತಾ ಕವಚ ಹಾಗೂ ಪಿಪಿಇ ಕಿಟ್‌ಗಳನ್ನು ಬಳಸಲಾಗುತ್ತದೆ. ಮತದಾನದ ನೋಂದಣಿ ಪುಸ್ತಕದಲ್ಲಿ ಸಹಿಹಾಕುವಾಗ ಎಲ್ಲಾ ಮತದಾರರಿಗೆ ಕೈಗವಸುಗಳನ್ನು ನೀಡಲಾಗುವುದು ಹಾಗೂ ಮತದಾನಕ್ಕೆ ಇವಿಎಂ ಗುಂಡಿಯನ್ನು ಒತ್ತಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News