ಬ್ರಿಟನ್: ಅತ್ಯಾಚಾರ, ಕೊಲೆ ಆರೋಪದಲ್ಲಿ ಭಾರತೀಯನಿಗೆ ಜೀವನಪರ್ಯಂತ ಜೈಲು

Update: 2020-08-21 16:50 GMT

ಲಂಡನ್, ಆ. 21: ಭಾರತದಿಂದ ಬ್ರಿಟನ್‌ಗೆ ಗಡಿಪಾರಾಗಿದ್ದ 36 ವರ್ಷದ ವ್ಯಕ್ತಿಯೊಬ್ಬನಿಗೆ, ಹಲವು ಮಹಿಳೆಯರ ಅತ್ಯಾಚಾರ ಮತ್ತು ಒಂದು ಕೊಲೆ ಪ್ರಕರಣಗಳಲ್ಲಿ ಲಂಡನ್‌ನ ನ್ಯಾಯಾಲಯವೊಂದು ಗುರುವಾರ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿದೆ.

ಬ್ರಿಟನ್‌ನ ಕ್ರಾಯ್ಡನ್ ಕ್ರೌನ್ ನ್ಯಾಯಾಲಯವು ಅಪರಾಧಿ ಅಮನ್ ವ್ಯಾಸ್‌ಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದು, ಆತ ಕನಿಷ್ಠ 37 ವರ್ಷವನ್ನು ಜೈಲಿನಲ್ಲಿ ಕಳೆಯಬೇಕು ಎಂದು ಹೇಳಿದೆ.

‘‘ಅಮನ್ ವ್ಯಾಸ್ ಮೂವರು ಮಹಿಳೆಯರ ಮೇಲೆ ಭಯಾನಕ ದಾಳಿ ನಡೆಸಿದ್ದಾನೆ. ಒಂದು ಪ್ರಕರಣದಲ್ಲಿ ಸಂತ್ರಸ್ತೆ ಮಿಶೆಲ್ ಸಮರವೀರರ ಕೊಲೆಯಾಗಿದೆ. ಬಳಿಕ, ಆತ ತನ್ನ ಅಪರಾಧಗಳನ್ನು ಮುಚ್ಚಿಹಾಕುವುದಕ್ಕಾಗಿ ಭಾರತಕ್ಕೆ ಪರಾರಿಯಾದನು. ಪ್ರಕರಣಗಳ ವಿಚಾರಣೆಯು 10 ವರ್ಷಗಳಿಗೂ ಹೆಚ್ಚು ಕಾಲ ನಡೆದಿದ್ದು, ಈ ಸಂದರ್ಭದಲ್ಲಿ ನೈತಿಕ ಸ್ಥೈರ್ಯ ತೋರಿಸಿದ ಸಂತ್ರಸ್ತೆಯರು ಮತ್ತು ಅವರ ಕುಟುಂಬ ಸದಸ್ಯರನ್ನು ನಾನು ಶ್ಲಾಘಿಸುತ್ತೇನೆ’’ ಎಂದು ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ತನಿಖಾಧಿಕಾರಿ ಸಾರ್ಜಂಟ್ ಶಲೀನಾ ಶೇಖ್ ಹೇಳಿದರು.

ಲಂಡನ್‌ನ ಓಲ್ಡ್ ಬೇಲಿ ನ್ಯಾಯಾಲಯವು ಕಳೆದ ತಿಂಗಳು ಅಮನ್ ವ್ಯಾಸ್‌ನನ್ನು ಈ ಎಲ್ಲ ಪ್ರಕರಣಗಳಲ್ಲಿ ದೋಷಿ ಎಂದು ನಿರ್ಧರಿಸಿತ್ತು.

ಈ ಅಪರಾಧಗಳು ಈಶಾನ್ಯ ಲಂಡನ್‌ನ ವಾಲ್ತಮ್‌ಸ್ಟೊವ್ ನಗರದ ವಿವಿಧ ಸ್ಥಳಗಳಲ್ಲಿ 2009ರ ಮಾರ್ಚ್ ಮತು ಮೇ ತಿಂಗಳ ನಡುವಿನ ಅವಧಿಯಲ್ಲಿ ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News