ಸ್ವಾತಂತ್ರ್ಯದ 38 ವರ್ಷಗಳ ಬಳಿಕ ಬಾಲಿವುಡ್‌ಗೆ ನೆನಪಾದ ಅಂಬೇಡ್ಕರ್

Update: 2020-08-22 07:18 GMT

ಇಂದು ದಲಿತರು ನಿರ್ದೇಶಕರಲ್ಲದ ಅಥವಾ ಜಾತೀಯತೆ ಅಥವಾ ತಾರತಮ್ಯಕ್ಕೆ ಸಂಬಂಧಿಸಿದ ಕಥೆಗಳು ಇಲ್ಲದ ಚಿತ್ರಗಳಲ್ಲಿಯೂ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನಾವು ಕಾಣಬಹುದಾಗಿದೆ. ಮನೆಗಳ ಗೋಡೆ, ಪೊಲೀಸ್ ಠಾಣೆಗಳಲ್ಲಿ ಅಥವಾ ಕೋರ್ಟ್ ರೂಂ ಸೇರಿದಂತೆ ಚಿತ್ರದ ಹಲವಾರು ದೃಶ್ಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿರುವುದು ಸಾಮಾನ್ಯವಾಗಿದೆ. ಖಂಡಿತವಾಗಿಯೂ ಈ ಬೆಳವಣಿಗೆಯು ದೇಶದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರು ವಹಿಸಿದ ಪಾತ್ರವನ್ನು ವ್ಯಾಪಕವಾಗಿ ಒಪ್ಪಿಕೊಂಡಿರುವುದರ ಸೂಚನೆಯಾಗಿದೆ.


‘‘ಸಿನೆಮಾದ ದೃಶ್ಯಗಳ ಹಿನ್ನೆಲೆಯು ಮಹತ್ವದ್ದಾಗಿದೆ... ಇದು ಒಂದೆಡೆ ವಾಸಿಸುವ ಜನರ ಸ್ಥಿತಿ, ಗತಿಗಳನ್ನು ಹೇಳುತ್ತದೆ. ಪ್ರತಿಯೊಂದು ದೃಶ್ಯಗಳ ಹಿನ್ನೆಲೆಯ ಹಿಂದೆ ಒಂದು ಕಥೆೆಯಿರುತ್ತದೆ. ಅದು ಒಂದು ಚಿತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತದೆಯೆಂಬುದಾಗಿ ನಾನು ನಂಬುತ್ತೇನೆ’’ ಎಂದು ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಪಾ. ರಂಜಿತ್ ಒಂದೊಮ್ಮೆ ಹೇಳಿದ್ದರು.

ಹಲವಾರು ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಬಾಲಿವುಡ್‌ನ ಜಾತಿವಾದಿ ನಿರ್ದೇಶಕರು ಅಸ್ಪಶ್ಯರೆಂಬಂತೆ ಪರಿಗಣಿಸಿದ್ದರು. ಒಂದು ಚಿತ್ರದ ಮುನ್ನೆಲೆ ಕಥೆಯಲ್ಲಿ ಬಿಡಿ, ಸಿನೆಮಾದ ದೃಶ್ಯಗಳ ಹಿನ್ನೆಲೆಯಿಂದಲೂ ಅಳಿಸಿ ಹಾಕಲಾಗುತ್ತಿತ್ತು.

1982ರಲ್ಲಿ ತಯಾರಾದ ಹಾಲಿವುಡ್‌ನ ಕ್ಲಾಸಿಕ್ ಚಿತ್ರ ‘ಗಾಂಧಿ’ಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಅದರಲ್ಲಿ ಅಂಬೇಡ್ಕರ್‌ರನ್ನು ಒಂದು ಪಾತ್ರವಾಗಿ ಉಲ್ಲೇಖಿಸಲೇ ಇಲ್ಲ. ಮೂರೂವರೆ ತಾಸುಗಳ ಈ ದೀರ್ಘಾವಧಿಯ ಚಿತ್ರದಲ್ಲಿ ಅಂಬೇಡ್ಕರ್ ಬಗ್ಗೆ ಒಂದೇ ಒಂದು ಪ್ರಸ್ತಾಪವೇ ಇರಲಿಲ್ಲ. ಇದು ನಿಜಕ್ಕೂ ಅಚ್ಚರಿಕರವಾಗಿದೆ. ಸಂವಿಧಾನದ ಜನಕ, ದೇಶದ ಪ್ರಪ್ರಥಮ ಕಾನೂನು ಹಾಗೂ ನ್ಯಾಯಾಂಗ ಸಚಿವ, ದಮನಿತ ವರ್ಗಗಳು ಹಾಗೂ ಮಹಿಳೆಯರ ಹಕ್ಕುಗಳ ಪ್ರಬಲ ಪ್ರತಿಪಾದಕರಾದ ಅಂಬೇಡ್ಕರ್ ಅವರಿಗೆ ಭಾರತದ ಇತಿಹಾಸದಲ್ಲಿ ಇರುವ ಸ್ಥಾನಮಾನವನ್ನು ನೋಡಿದಾಗ ಇದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ.

ಜೀವನ ಚರಿತ್ರೆಯಾಧಾರಿತ ಚಿತ್ರಗಳಲ್ಲಿ ಆಯಾ ವ್ಯಕ್ತಿಯ ಪ್ರಮುಖ ವಿರೋಧಿ ಗಳನ್ನು ಕೂಡಾ ತೋರಿಸಲಾಗುತ್ತದೆ. ಆದರೆ ದಲಿತರ ಸಾಮಾಜಿಕ-ರಾಜಕೀಯ ಹಾಗೂ ಧಾರ್ಮಿಕ ಸ್ಥಾನಮಾನಗಳಿಗೆ ಸಂಬಂಧಿಸಿ ಗಾಂಧೀಜಿಯವರ ಎದುರು ವಾದ ಮಾಡಿದವರು ಅಂಬೇಡ್ಕರ್. ದಲಿತರಿಗೆ ಪ್ರತ್ಯೇಕ ಮತದಾರಪಟ್ಟಿಯನ್ನು ಬಿಡುಗಡೆಗೊಳಿಸುವ ಪ್ರಸ್ತಾಪ ಬಂದಾಗಲೂ ಅಂಬೇಡ್ಕರ್ ಆಮರಣಾಂತ ಉಪವಾಸವನ್ನು ನಡೆಸಿದ್ದರು.

ರಿಚರ್ಡ್ ಅಟೆನ್‌ಬರೋ ನಿರ್ದೇಶನದ ಗಾಂಧಿ ಚಿತ್ರ ಹಾಲಿವುಡ್‌ನಲ್ಲಿ ನಿರ್ಮಾಣಗೊಂಡಿದ್ದರೂ, 90ರ ದಶಕದವರೆಗೆ ಭಾರತದ ಆಳುವ ವರ್ಗವು ಅಂಬೇಡ್ಕರ್ ಅವರನ್ನು ಯಾವ ರೀತಿಯಾಗಿ ನೋಡಿಕೊಳ್ಳುತ್ತಿತ್ತೆಂಬುದಕ್ಕೆ ಅದೊಂದು ಸೂಕ್ತ ನಿದರ್ಶನವಾಗಿದೆ.

ಭಾರತದ ಸಂವಿಧಾನದ ಶಿಲ್ಪಿಯಾದ ಹೊರತಾಗಿಯೂ ಸ್ವಾತಂತ್ರ ದೊರೆತ 40 ವರ್ಷಗಳಿಗಿಂತಲೂ ಅಧಿಕ ಸಮಯದವರೆಗೆ ಸಂಸತ್‌ಭವನದ ಸೆಂಟ್ರಲ್‌ಹಾಲ್‌ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವೇ ಕಾಣುತ್ತಿರಲಿಲ್ಲ. ಸ್ವಾತಂತ್ರ ದೊರೆತ ಬಳಿಕ ಭಾರತೀಯ ಚಿತ್ರಗಳಲ್ಲಿ ಅಂಬೇಡ್ಕರ್ ಅವರ ಪಾತ್ರ ಕಾಣಿಸಿಕೊಳ್ಳುವುದು ಪ್ರಾರಂಭವಾಗಲು 32 ವರ್ಷಗಳೇ ಹಿಡಿದವು. ಅಲ್ಲಿಯ ತನಕ ಶಾಲಾ ಹಾಗೂ ಕಾಲೇಜು ಪಠ್ಯಪುಸ್ತಕಗಳು ಕೂಡಾ ಅಂಬೇಡ್ಕರ್ ಕುರಿತಾಗಲಿ ಅಥವಾ ದೇಶಕ್ಕೆ ಅವರ ಕೊಡುಗೆಗಳ ಬಗ್ಗೆ ಪ್ರಸ್ತಾವಿಸಿದ್ದುದು ತೀರಾ ಅಪರೂಪ. ಟಿವಿ, ರೇಡಿಯೊ ಅಥವಾ ಯಾವುದೇ ದೃಶ್ಯ-ಶ್ರಾವ್ಯ ಮಾಧ್ಯಮಗಳಲ್ಲಿ ಅವರು ದೀರ್ಘ ಸಮಯದಿಂದ ನಾಪತ್ತೆಯಾಗಿದ್ದರು.

ಆಳುವ ವರ್ಗವಾಗಿ ರೂಪುಗೊಂಡಿರುವ ಭಾರತದ ಮೇಲ್ಜಾತಿಗಳು ಕೂಡಾ ಆಧುನಿಕ ಭಾರತದ ನಿರ್ಮಾಣಕಾರರಾಗಿ ಅಂಬೇಡ್ಕರ್ ಅವರ ಅಪಾರ ಕೊಡುಗೆಯ ಬಗ್ಗೆ ಕುರುಡಾಗಿತ್ತು. ಸಹಜವಾಗಿ ಈ ಪ್ರವೃತ್ತಿ ಹಿಂದಿ ಸಿನೆಮಾಗಳಲ್ಲಿಯೂ ಪ್ರತಿಫಲನಗೊಂಡಿತ್ತು.

ನಗಣ್ಯ ಪ್ರಾತಿನಿಧ್ಯ 
 ಹಾಗೆ ನೋಡಿದರೆ 2000ನೇ ಇಸವಿಯವರೆಗೂ ಸವರ್ಣೀಯ ನಿರ್ಮಾಪಕರು ಅಥವಾ ನಿರ್ದೇಶಕರ ಚಿತ್ರಗಳಲ್ಲಿ ಮಹಾತ್ಮ ಗಾಂಧೀಜಿ, ಲೋಕಮಾನ್ಯ ತಿಲಕ್, ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಶ್ ಚಂದ್ರ ಭೋಸ್ ಹಾಗೂ ಸ್ವಾಮಿ ವಿವೇಕಾನಂದ ಅವರಂತಹ ಮೇಲ್ಜಾತಿಗೆ ಸೇರಿದ ಅಥವಾ ಸವರ್ಣೀಯ ಹಿನ್ನೆಲೆಯ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರ ಭಾವಚಿತ್ರಗಳನ್ನು ಹಿಂದಿ ಚಿತ್ರಗಳ ದೃಶ್ಯಗಳ ಹಿನ್ನೆಲೆಯಲ್ಲಿ ತೋರಿಸಲಾಗುತ್ತದೆ.

ದಲಿತರ ಕತೆಯನ್ನು ಹೇಳುವ ಬಾಲಿವುಡ್ ಚಿತ್ರಗಳಲ್ಲಿಯೂ ಅಂಬೇಡ್ಕರ್ ‘ನಾಪತೆ’್ತಯಾಗಿದ್ದರು. ಬಿಮಲ್ ರಾಯ್ ನಿರ್ದೇಶನದ ‘ಸುಜಾತಾ’(1959) ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಚಿತ್ರದಲ್ಲಿ ಬ್ರಾಹ್ಮಣನಾದ ಕಥಾನಾಯಕ ಅಧೀರ್ ಚೌಧುರಿ (ಸುನೀಲ್ ದತ್) ಅವರು ‘ಅಸ್ಪಶ್ಯ’ಳಾದ ಸುಜಾತಾ (ನೂತನ್)ಳನ್ನು ಪ್ರೀತಿಸುತ್ತಾನೆ. ಪ್ರಗತಿಪರನಾದ ಅಧೀರ್, ತನ್ನ ಮನೆಯಲ್ಲಿ ರಬೀಂದ್ರನಾಥ್ ಠಾಗೋರ್, ಗಾಂಧೀಜಿ ಹಾಗೂ ವಿವೇಕಾನಂದರಂತಹವರ ಸುಧಾರಣಾವಾದಿಗಳ ಪೋಟೊಗಳನ್ನು ತೂಗುಹಾಕಿದ್ದಾನೆಯೇ ಹೊರತು ಅಂಬೇಡ್ಕರ್ ಅವರ ಭಾವಚಿತ್ರವನ್ನಲ್ಲ.

ಬ್ರಾಹ್ಮಣನೊಬ್ಬ ಪ್ರಗತಿಪರನಾಗಿರುವ ಹೊರತಾಗಿಯೂ, 60ರ ದಶಕದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮನೆಯಲ್ಲಿ ಯಾಕೆ ತೂಗು ಹಾಕಬೇಕೆಂದು ನೀವು ವಾದಿಸಬಹುದು. ಆದರೆ ಉದಾಹರಣೆಗೆ ತಪನ್ ಸಿನ್ಹಾ ಅವರ ‘ಝಿಂದಗಿ ಝಿಂದಗಿ’ (72) ಚಿತ್ರವನ್ನೇ ತೆಗೆದುಕೊಳ್ಳಿರಿ. ಈ ಸಿನೆಮಾದಲ್ಲಿ ನಾಯಕ ನಟ ಸುನೀಲ್‌ದತ್ ವೈದ್ಯನಾಗಿದ್ದು, ಅಸ್ಪಶ್ಯ ಕುಟುಂಬಕ್ಕೆ ಸೇರಿದವನಾಗಿರುತ್ತಾನೆ. ಈ ಚಿತ್ರದಲ್ಲಿ ಒಂದಲ್ಲ, ಎರಡು ಅಂತರ್ ಜಾತಿ ಪ್ರೇಮ ಕಥೆಗಳನ್ನು ತೋರಿಸಲಾಗಿದೆ. ಆದರೆ ಈ ಚಿತ್ರದ ಯಾವುದೇ ದೃಶ್ಯದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

ಹಿಂದಿ ಸಿನೆಮಾಗಳ ಪ್ರಮುಖ ಪಾತ್ರಗಳ ಮನೆಗಳಲ್ಲಿ ಮಾತ್ರವಲ್ಲದೆ, ಕೋರ್ಟ್ ರೂಂಗಳ ಗೋಡೆಗಳಲ್ಲಿ, ಪೊಲೀಸ್ ಠಾಣೆಗಳು ಅಥವಾ ಸರಕಾರಿ ಆಸ್ಪತ್ರೆಗಳ ಗೋಡೆಗಳಲ್ಲಿಯೂ ಅಂಬೇಡ್ಕರ್ ಭಾವಚಿತ್ರಗಳ ಉಪಸ್ಥಿತಿ ಕಾಣಿಸುವುದಿಲ್ಲ.

ಆದರೆ ಜಬ್ಬಾರ್ ಪಟೇಲ್ ನಿರ್ದೇಶನದ ಅಂಬೇಡ್ಕರ್ ಅವರ ಬಯೋಪಿಕ್‌ನಲ್ಲಿ ಬಾಲಿವುಡ್ ಸಿನೆಮಾರಂಗದ ಈ ಪ್ರವೃತ್ತಿಯಲ್ಲಿ ನಿಧಾನಗತಿಯ ಬದಲಾವಣೆಯನ್ನು ತರುವ ಪ್ರಯತ್ನ ಮಾಡಲಾಗಿದೆ. 2000ದಲ್ಲಿ ಬಿಡುಗಡೆಯಾದ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್’ ಇಂಗ್ಲಿಷ್-ಹಿಂದಿ ಚಿತ್ರವು, ಅಂಬೇಡ್ಕರ್ ಅವರ ಜೀವನ, ಶಿಕ್ಷಣ, ರಾಜಕೀಯ ಹಾಗೂ ವೃತ್ತಿ ಜೀವನದ ಪಯಣವನ್ನು ಮನೋಜ್ಞವಾಗಿ ಮರುಸೃಷ್ಟಿಸಿತ್ತು. ಗಾಂಧೀಜಿ ಜೊತೆಗಿನ ಅವರ ಪ್ರಸಿದ್ಧ ಒಡಂಬಡಿಕೆ, ಈ ಇಬ್ಬರೂ ನಾಯಕರ ನಡುವಿನ ವಿಭಿನ್ನ ರಾಜಕೀಯ ನಿಲುವುಗಳನ್ನು ಅವರು ಅತ್ಯಂತ ಸಮರ್ಥವಾಗಿ ಬೆಳ್ಳಿತೆರೆಯಲ್ಲಿ ಮೂಡಿಸಿದ್ದಾರೆ. ಪ್ರದರ್ಶಿತವಾದ ಸಿನೆಮಾ ಮಂದಿರಗಳ ಸಂಖ್ಯೆ ಕಡಿಮೆಯಿದ್ದರೂ, ವಿವಿಧ ಭಾಷೆಗಳಿಗೆ ಡಬ್ ಮಾಡಲು ನಿರ್ಮಾಪಕರು ಹಿಂದೇಟು ಹಾಕಿದ್ದರೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚಿತ್ರ ಯಶಸ್ಸು ಕಂಡಿತ್ತು. ಚಿತ್ರ ಪೂರ್ಣಗೊಂಡು 12 ವರ್ಷಗಳು ಕಳೆದ ಬಳಿಕವೂ ಈ ಚಿತ್ರ ಸಾರ್ವಜನಿಕ ಪ್ರದರ್ಶನಕ್ಕೆ ಬಿಡುಗಡೆಗೊಂಡಿರಲಿಲ್ಲ. ಈ ಚಿತ್ರವನ್ನು ವಿಶಾಲವಾದ ಪ್ರೇಕ್ಷಕ ವರ್ಗದ ಮುಂದೆ ಕೊಂಡೊಯ್ಯಲು ಅಧಿಕಾರಿಗಳು ಆಸಕ್ತಿಯನ್ನು ಹೊಂದಿರಲಿಲ್ಲವೆಂದು ತಿಳಿದುಬಂದಿದೆ.

ಮರಾಠಿ ಚಿತ್ರರಂಗದಿಂದ ಬಂದವರಾದ ಜಬ್ಬಾರ್ ಪಟೇಲ್ ಬಹುಶಃ ತನ್ನ ಚಿತ್ರದ ದೃಶ್ಯಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಬಳಸಿಕೊಂಡ ಮೊತ್ತ ಮೊದಲ ನಿರ್ದೇಶಕರಾಗಿದ್ದಾರೆ. 1979ರಲ್ಲಿ ಅವರ ನಿರ್ದೇಶನದ ರಾಜಕೀಯ ಹಿನ್ನೆಲೆಯ ಕಥಾ ಚಿತ್ರ ‘ಸಿಂಹಾಸನ’ದಿಂದ ಆರಂಭಗೊಂಡು ಅವರ ಎಲ್ಲಾ ಚಿತ್ರಗಳಲ್ಲಿಯೂ ಅಂಬೇಡ್ಕರ್ ಭಾವಚಿತ್ರ ಇದ್ದೇ ಇರುತ್ತದೆ. ‘ಸಿಂಹಾಸನ’ ಬಿಡುಗಡೆಯಾದ ವರ್ಷವೇ ಆಗಿನ ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರಕಾರವು ಅಂಬೇಡ್ಕರ್ ಅವರ ಅಪ್ರಕಟಿತ ಬರಹಗಳನ್ನು ಹಾಗೂ ಭಾಷಣಗಳ ಪುಸ್ತಕ ಸಂಪುಟಗಳ ಮುದ್ರಣವನ್ನು ಆರಂಭಿಸಿತ್ತು.

ಸ್ಮಿತಾ ಪಾಟೀಲ್ ಅಭಿನಯದ ಮರಾಠಿ ಚಿತ್ರ ‘ಉಂಬರ್ತಾ’ (1982)ದಲ್ಲಿ ಮಹಿಳಾ ಆಶ್ರಮದಲ್ಲಿರುವ ನಾಯಕಿಯ ಕಚೇರಿಯಲ್ಲಿ ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರವನ್ನು ಕಾಣಬಹುದಾಗಿದೆ. ಜಬ್ಬಾರ್ ಪಟೇಲ್ ನಿರ್ದೇಶನದ ಪ್ರಶಸ್ತಿ ವಿಜೇತ ಅಂತರ್‌ಜಾತಿಯ ಪ್ರೇಮ ಕಥಾನಕ ‘ಮುಕ್ತಾ’ (1994) ಚಿತ್ರದ ದೃಶ್ಯಗಳ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಕಾಣಿಸುತ್ತದೆ.

80ರ ದಶಕದ ಬಿಎಸ್ಪಿ ಅಲೆ
 ಆದಾಗ್ಯೂ, ಕೆಲವು ಮರಾಠಿ ಚಿತ್ರಗಳನ್ನು ಹೊರತುಪಡಿಸಿ ಹಿಂದಿ ಚಿತ್ರರಂಗವು 1985ರವರೆಗೂ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವಿರುವುದು ಯೋಗ್ಯವೆಂದು ಭಾವಿಸಿರಲಿಲ್ಲ. ವಿಶೇಷವಾಗಿ ಉತ್ತರಭಾರತದಲ್ಲಿ ಕಾನ್ಶಿರಾಂ ನೇತೃತ್ವದ ಬಿಎಸ್ಪಿ ಪಕ್ಷವು ಪ್ರಭಾವಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಬಳಿಕ ಈ ಪ್ರವೃತ್ತಿ ಬದಲಾಯಿತು.

1995ರವರೆಗೆ ಬಿಎಸ್ಪಿಗೆ ಅಧಿಕಾರಕ್ಕೇರಲು ಸಾಧ್ಯವಾಗಲಿಲ್ಲವಾದರೂ ದೇಶದ ಪ್ರತಿಯೊಂದು ನಗರಗಳು ಹಾಗೂ ಪಟ್ಟಣದ ಸಂದುಗೊಂದಿಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಬಹುಜನ ಸಮಾಜ ಪಕ್ಷವು ಪ್ರತಿಪಾದಿಸಿತ್ತು. ಕಾನ್ಶಿರಾಂ ಅವರು ದಲಿತ ಶೋಷಿತ ಸಮಾಜ್ ಸಂಘರ್ಷ ಸಮಿತಿ (ಡಿಎಸ್4)ಯ ಅಂಗವಾಗಿದ್ದರು. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಒಕ್ಕೂಟ (ಬಿಎಎಂಸಿಇಎಫ್) ಹಾಗೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ, ಅಲ್ಪಸಂಖ್ಯಾತ ಉದ್ಯೋಗಿಗಳ ಸಂಘಟನೆಯಾದ ಬಿಎಎಂಸಿಇಎಫ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಅಂಬೇಡ್ಕರ್ ಅವರ ಭಾವಚಿತ್ರವನ್ನು ತೂಗುಹಾಕುವ

ಪದ್ಧತಿಯನ್ನು ಆಳವಡಿಸಿಕೊಂಡವು. ಆನಂತರ ಸರಕಾರಿ ಕಟ್ಟಡಗಳ ಒಳಗೂ ಅಂಬೇಡ್ಕರ್ ಭಾವಚಿತ್ರಗಳು ಕಾಣಿಸಿದವು.
ಬಿಎಸ್ಪಿ ಅಲೆಯು ಬೆಳೆಯುತ್ತಿದ್ದಂತೆಯೇ, ನಿಧಾನವಾಗಿ ಹಿಂದಿ ಸಿನೆಮಾ ರಂಗದಲ್ಲಿ ಅಂಬೇಡ್ಕರ್ ಬಗ್ಗೆ ಒಲವು ಪ್ರಕಟವಾಗತೊಡಗಿತು. 1985ರಲ್ಲಿ ಬಿಡುಗಡೆಯಾದ ರಾಜೇಶ್ ಖನ್ನಾ ಹಾಗೂ ಸ್ಮಿತಾ ಪಾಟೀಲ್ ಅಭಿನಯದ ಮುಖ್ಯವಾಹಿನಿಯ ಚಿತ್ರವಾದ ‘ಆಖಿರ್ ಕ್ಯೂಂ’ ಇದಕ್ಕೆ ಮೊದಲ ಪುರಾವೆಯಾಗಿದೆ. ಈ ಚಿತ್ರದ ನಾಯಕಿ ಪ್ರಿಯಾ (ಸ್ಮಿತಾ ಪಾಟೀಲ್), ಸರಕಾರಿ ಸ್ವಾಮ್ಯದ ದೂರದರ್ಶನ ಟಿವಿ ಜಾಲದಲ್ಲಿ ಉದ್ಯೋಗಿಯಾಗಿರುತ್ತಾಳೆ. ಆಕೆಯ ಕಚೇರಿ ಕ್ಯಾಬಿನ್ ಕುರ್ಚಿಯ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವಿರುತ್ತದೆ. ಆ ಚಿತ್ರದ ನಿರ್ದೇಶಕ ಜೆ. ಓಂ. ಪ್ರಕಾಶ್ ಅವರು ಮೂಲತಃ ಪಂಜಾಬಿಯಾಗಿದ್ದು, ಅವರಿಗೆ ಪಂಜಾಬಿ ಸಂಜಾತ ಬಿಎಸ್ಪಿ ನಾಯಕ ಕಾನ್ಶಿರಾಂ ಹಾಗೂ ಅವರ ಕೆಲಸಗಳ ಬಗ್ಗೆ ಒಂದಿಷ್ಟು ಜ್ಞಾನವಿರುವ ಸಾಧ್ಯತೆಯಿದೆ.

1989ರಲ್ಲಿ ರಾಜೀವ್ ಗಾಂಧಿ ಸರಕಾರವು ಪತನಗೊಂಡ ಬಳಿಕ ಪ್ರಧಾನಿ ವಿ.ಪಿ.ಸಿಂಗ್ ಅವರ ಸರಕಾರವು ಅಂಬೇಡ್ಕರ್ ಬ್ರಾಂಡ್ ಅನ್ನು ಉತ್ತೇಜಿಸುವ ಕಾರ್ಯವನ್ನು ಚುರುಕುಗೊಳಿಸಿತು. ಅಂತಿಮವಾಗಿ ಸಂವಿಧಾನ ಶಿಲ್ಪಿಯ ಭಾವಚಿತ್ರ ಸಂಸತ್‌ಭವನದ ಸೆಂಟ್ರಲ್ ಹಾಲ್‌ನಲ್ಲಿ ಸ್ಥಾಪನೆಗೊಂಡಿತು. ಆನಂತರ 1991ರಲ್ಲಿ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ಕೂಡಾ ಘೋಷಿಸಲಾಯಿತು.

ಇದಾದ ಕೂಡಲೇ 1992-93ರ ಅವಧಿಯಲ್ಲಿ ಮಾಹಿತಿ ಹಾಗೂ ಪ್ರಸಾರ ಮತ್ತು ದೂರದರ್ಶನ ಸಚಿವಾಲಯವು, ಡಾ.ಬಿ.ಆರ್.ಅಂಬೇಡ್ಕರ್ ಜೀವನಚರಿತ್ರೆಯ ಕುರಿತಾದ ಧಾರಾವಾಹಿಯನ್ನು ಆರಂಭಿಸಿತ್ತು.
2017ರಲ್ಲಿ ಭಾರತದಿಂದ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ನ್ಯೂಟನ್, ಆ ವರ್ಷವೇ ಬಿಡುಗಡೆಯಾದ ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ 2’ ಚಿತ್ರದ ಹಲವಾರು ದೃಶ್ಯಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವು ನ್ಯಾಯಾಧೀಶರ ಕೊಠಡಿಯ ಗೋಡೆಯಲ್ಲಿ ಕಾಣಿಸಿಕೊಂಡಿದೆ.

ಅದೇ ರೀತಿ ‘ಮುಕ್ತಾಬಾಝ್’ (2017), ‘ಆರ್ಟಿಕಲ್ 15’ (2019), ನೆಟ್‌ಫ್ಲಿಕ್ಸ್ ಸರಣಿ ‘ಸ್ಯಾಕ್ರೆಡ್ ಗೇಮ್ಸ್’ (2018) ಅಥವಾ ಇತ್ತೀಚೆಗೆ ತೆರೆಕಂಡ ‘ರಾತ್ ಅಖೇಲಿ ಹೈ’ (2020) ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್ ಚಿತ್ರವು ಬಾಲಿವುಡ್ ಚಿತ್ರಗಳಲ್ಲಿ ಸಾಮಾನ್ಯವಾಗುತ್ತಿರುವುದು ಕಂಡುಬಂದಿದೆ.

ಈ ಮಧ್ಯೆ ಮರಾಠಿ ಚಿತ್ರ ನಿರ್ದೇಶನದ ‘ಫ್ಯಾಂಡ್ರಿ’ ಚಿತ್ರದಲ್ಲಿ ದಲಿತ ಜಬಾಯಾ ಅವರು ತನ್ನ ಶಾಲೆಯ ಎದುರಿನಲ್ಲಿ ಹಂದಿಯ ಕಳೇಬರವನ್ನು ಎಳೆದುಕೊಂಡು ಹೋಗುತ್ತಿರುತ್ತಾನೆ. ಆತ ಹಾದುಹೋಗುವಾಗ ಹಿನ್ನೆಲೆಯಲ್ಲಿ ಗೋಡೆಯೊಂದರಲ್ಲಿ ಅಂಬೇಡ್ಕರ್ ಅವರ ಉಬ್ಬುಚಿತ್ರವಿರುತ್ತದೆ. ಇದು ಭಾರತೀಯ ಸಿನೆಮಾರಂಗದ ಅತ್ಯಂತ ಹೃದಯವಿದ್ರಾವಕ ದೃಶ್ಯಗಳಲ್ಲೊಂದಾಗಿ ಉಳಿದಿದೆ.

ತಮಿಳು ಸಿನೆಮಾ ನಿರ್ದೇಶಕ ಪಾ.ರಂಜಿತ್, ತನ್ನ ಮೊದಲ ಚಿತ್ರ ‘ಅಟ್ಟಾಕತ್ತಿ’ (2012)ಯಲ್ಲಿ ಶಾಲಾ ಗೋಡೆಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಭಾವಚಿತ್ರಗಳೆರಡನ್ನೂ ಹಲವಾರು ಬಾರಿ ತೋರಿಸಿದ್ದಾರೆ. ‘ಕಬಾಲಿ’(2016) ಹಾಗೂ ‘ಕಾಲಾ’(2018)ದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಹಾಗೂ ಗಾಂಧಿ ಚಿತ್ರಗಳನ್ನು ಅಕ್ಕಪಕ್ಕದಲ್ಲಿರಿಸಿ ತೋರಿಸಿದ್ದಾರೆ. ದಲಿತ ಬಹುಜನರ ಸ್ಫೂರ್ತಿ ಘೋಷಣೆಯಾದ ‘ಜೈಭೀಮ್’ ಪದವನ್ನು ಕೂಡಾ ಚಿತ್ರದ ಸಂಭಾಷಣೆಯಲ್ಲಿ ಸೇರಿಸಿದ್ದಾರೆ. ‘ಕಾಲಾ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಾನೂ ಕೂಡಾ ದಲಿತನೆಂಬುದನ್ನು ಬಹಿರಂಗಪಡಿಸುತ್ತಾನೆ.

ಇಂದು ದಲಿತರು ನಿರ್ದೇಶಕರಲ್ಲದ ಅಥವಾ ಜಾತೀಯತೆ ಅಥವಾ ತಾರತಮ್ಯಕ್ಕೆ ಸಂಬಂಧಿಸಿದ ಕಥೆಗಳು ಇಲ್ಲದ ಚಿತ್ರಗಳಲ್ಲಿಯೂ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನಾವು ಕಾಣಬಹುದಾಗಿದೆ. ಮನೆಗಳ ಗೋಡೆ, ಪೊಲೀಸ್ ಠಾಣೆಗಳಲ್ಲಿ ಅಥವಾ ಕೋರ್ಟ್ ರೂಂ ಸೇರಿದಂತೆ ಚಿತ್ರದ ಹಲವಾರು ದೃಶ್ಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿರುವುದು ಸಾಮಾನ್ಯವಾಗಿದೆ. ಖಂಡಿತವಾಗಿಯೂ ಈ ಬೆಳವಣಿಗೆಯು ದೇಶದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರು ವಹಿಸಿದ ಪಾತ್ರವನ್ನು ವ್ಯಾಪಕವಾಗಿ ಒಪ್ಪಿಕೊಂಡಿರುವುದರ ಸೂಚನೆಯಾಗಿದೆ.

ನಿರ್ದೇಶಕ ಪಾ.ರಂಜಿತ್ ಹೇಳಿದಂತೆ ಸಿನೆಮಾದ ಹಿನ್ನೆಲೆಯ ದೃಶ್ಯಗಳಲ್ಲಿ ವ್ಯಾಪಕವಾದ ಶಕ್ತಿಯಿರುತ್ತದೆ. ಯಾಕೆಂದರೆ ಸಂಭಾಷಣೆ ಅಥವಾ ಸಂಗೀತವಿಲ್ಲದ ಹೊರತಾಗಿಯೂ ಅವು ಸಾಮಾಜಿಕ ವಾಸ್ತವತೆಗಳನ್ನು ಸೆರೆಹಿಡಿಯಬಲ್ಲವು. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೋರಿಸಿದ ಮಾತ್ರಕ್ಕೆ ಚಿತ್ರದ ನಿರ್ದೇಶಕರು, ಸಂವಿಧಾನದಶಿಲ್ಪಿಯ ರಾಜಕೀಯ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದಾರೆಂದು ಅರ್ಥವಲ್ಲ. ಆದಾಗ್ಯೂ, ನಿರ್ದೇಶಕರಿಗೆ ಪ್ರಸಕ್ತ ರಾಜಕೀಯ-ಸಾಮಾಜಿಕ ವಾಸ್ತವತೆಯ ಅರಿವಾಗಿದೆ ಹಾಗೂ ಅದನ್ನು ಅವರು ತಮ್ಮ ಚಿತ್ರದಲ್ಲಿ ಬಿಂಬಿಸಲು ಯತ್ನಿಸಿದ್ದಾರೆಂಬುದನ್ನು ಇದು ತೋರಿಸುತ್ತದೆ.

ಇದಕ್ಕೆ ಕಾರಣಗಳೇನೇ ಇರಲಿ, ಸಿನೆಮಾದಲ್ಲಾಗಲಿ ಅಥವಾ ನೈಜ ಬದುಕಿನ ಲ್ಲಾಗಲಿ ಅಂಬೇಡ್ಕರ್ ಅವರನ್ನು ದೀರ್ಘಕಾಲದಿಂದ ಕಡೆಗಣಿಸುತ್ತಾ ಬಂದಿರುವ ಈ ದೇಶದಲ್ಲಿ ಈ ಮಹಾನ್ ನಾಯಕ ಸರ್ವಾದರಣನೀಯನಾಗುತ್ತಿರುವುದು ನಿಜಕ್ಕೂ ಸಮಾಧಾನಪಟ್ಟುಕೊಳ್ಳುವಂತಹ ವಿಷಯ.

 ಕೃಪೆ: theprint.in 

Writer - ರವಿ ರತನ್

contributor

Editor - ರವಿ ರತನ್

contributor

Similar News