ನ್ಯಾಯಮೂರ್ತಿಗಳು ಕಾನೂನಿಗೆ ಅತೀತರಲ್ಲ: ನ್ಯಾಯಮೂರ್ತಿ ಕರ್ಣನ್
ಹೊಸದಿಲ್ಲಿ, ಆ.23: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿರುವುದು ಅಸಾಂವಿಧಾನಿಕ ಕ್ರಮ ಎಂದು ನ್ಯಾಯಾಂಗ ನಿಂದನೆ ಆರೋಪದಲ್ಲಿ 2017ರಲ್ಲಿ ಶಿಕ್ಷೆಗೊಳಗಾಗಿದ್ದ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿಗಳು ನ್ಯಾಯಕ್ಕೆ ಅತೀತರಲ್ಲ. ಹಾಲಿ ಹಾಗೂ ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಪಾರದರ್ಶಕ ವ್ಯವಸ್ಥೆ ಆರಂಭಿಸಲು ಇದು ಸಕಾಲ ಎಂದು ಅವರು ಸಲಹೆ ಮಾಡಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸದ್ಯದ ಸ್ಥಿತಿಯನ್ನು ಪ್ರಶಾಂತ್ ಭೂಷಣ್ ಅವರು ಟ್ವೀಟ್ ಮೂಲಕ ವಿವರಿಸಿದ್ದಾರೆ ಎಂದು ಮದ್ರಾಸ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿದ್ದ ಕರ್ಣನ್, 'ದ ಪ್ರಿಂಟ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಟ್ವೀಟ್ ರೂಪದಲ್ಲಿ ಅವರು ಸಂವಿಧಾನದತ್ತವಾಗಿ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನ್ಯಾಯಮೂರ್ತಿ ಕರ್ಣನ್ ಅವರನ್ನು ಆರು ತಿಂಗಳ ಕಾಲ ಜೈಲಿಗೆ ಕಳುಹಿಸುವ ಬಗೆಗಿನ ಸುಪ್ರೀಂಕೋರ್ಟ್ ಆದೇಶವನ್ನು ಹಿಂದೆ ಪ್ರಶಾಂತ್ ಭೂಷಣ್ ಸಮರ್ಥಿಸಿಕೊಂಡಿದ್ದರು.