ನಾಯಕತ್ವ ಬಿಕ್ಕಟ್ಟು: 20ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರಿಂದ ಸೋನಿಯಾ ಗಾಂಧಿಗೆ ಪತ್ರ
ಹೊಸದಿಲ್ಲಿ,ಆ.23: ಪಕ್ಷದ ನಾಯಕತ್ವ ವಿಷಯ ಕುರಿತು ಚರ್ಚೆಯಾಗಬೇಕು ಎಂದು ಆಗ್ರಹಿಸಿ ಮತ್ತು ವ್ಯಾಪಕ ಸುಧಾರಣೆಗಳನ್ನು ಸೂಚಿಸಿ 20ಕ್ಕೂ ಅಧಿಕ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಪ್ರಶಂಸಿಸಲಾಗಿದೆಯಾದರೂ,ಪಕ್ಷದಲ್ಲಿಯ ಹಾಲಿ ವ್ಯವಸ್ಥೆಯ ಕುರಿತು ಟೀಕೆಗಳೂ ಇವೆ. ಪಕ್ಷವು ನಿರಂತರವಾಗಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಲೇ ಇದೆ ಮತ್ತು ರಾಷ್ಟ್ರ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ )ಯು ಸೋಮವಾರ ತನ್ನ ಆನ್‌ಲೈನ್ ಸಭೆಯಲ್ಲಿ ಈ ಪತ್ರದ ಕುರಿತು ಚರ್ಚಿಸಲಿದೆ ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿವೆ.
ಕ್ರಿಯಾಶೀಲವಾಗಿರುವ ಪೂರ್ಣಕಾಲಿಕ ಮತ್ತು ಗೋಚರಣೀಯ ನಾಯಕತ್ವಕ್ಕಾಗಿ ಪತ್ರವು ಆಗ್ರಹಿಸಿದೆ. ರಾಹುಲ್ ಗಾಂಧಿಯವರ ವಿರುದ್ಧ ಯಾವುದೇ ಟೀಕೆಗಳಿಲ್ಲ ಮತ್ತು ಇದು ಪಕ್ಷದ ಪುನಃಶ್ಚೇತನಕ್ಕಾಗಿ ಪ್ರಾಮಾಣಿಕ ಮತ್ತು ರಚನಾತ್ಮಕ ಪ್ರಯತ್ನವಾಗಿದೆ ಎಂದು ಪತ್ರಕ್ಕೆ ಸಹಿ ಹಾಕಿರುವ ನಾಯಕರು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಮತ್ತು ಸೋನಿಯಾ ಅವರನ್ನು ಪ್ರಶಂಸಿಸಿರುವ ಪಕ್ಷವು,ಅವರು ಸಾಮೂಹಿಕ ನಾಯಕತ್ವದ ಅಖಂಡ ಭಾಗವಾಗಿರಲಿದ್ದಾರೆ ಎಂದು ಹೇಳಿದೆ.
ಪಕ್ಷದೊಳಗೆ ಹಲವಾರು ಸುಧಾರಣೆಗಳಿಗೂ ಪತ್ರವು ಕರೆ ನೀಡಿದೆ. ಅಧಿಕಾರ ವಿಕೇಂದ್ರೀಕರಣ,ರಾಜ್ಯ ಘಟಕಗಳ ಸಬಲೀಕರಣ ಮತ್ತು ಪ್ರತಿ ಹಂತದಲ್ಲಿಯೂ ಸಾಂಸ್ಥಿಕ ಚುನಾವಣೆಗಳು ಈ ಸುಧಾರಣೆಗಳಲ್ಲಿ ಸೇರಿವೆ ಎಂದು ಈ ಮೂಲಗಳು ಹೇಳಿವೆ.
ಪಕ್ಷದ ಎರಡು ಉನ್ನತ ಮಂಡಳಿಗಳಾದ ಸಿಡಬ್ಲ್ಯುಸಿ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷ (ಸಿಪಿಪಿ)ಗಳ ಕಾರ್ಯವೈಖರಿಯನ್ನೂ ಪತ್ರದಲ್ಲಿ ಟೀಕಿಸಲಾಗಿದೆ. ಸಿಡಬ್ಲುಸಿಯು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಪಕ್ಷಕ್ಕೆ ಮಾರ್ಗದರ್ಶನ ಒದಗಿಸುವಲ್ಲಿ ಅಸಮರ್ಥವಾಗಿದ್ದರೆ,ಸಂಸದೀಯ ಪಕ್ಷದ ಸಭೆಯು ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಭಾಷಣಗಳು ಮತ್ತು ಶ್ರದ್ಧಾಂಜಲಿಗಳಿಗೆ ಸೀಮಿತವಾಗಿವೆ ಎಂದು ಹಿರಿಯ ನಾಯಕರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಡಬ್ಲುಸಿ ಸದಸ್ಯರನ್ನೂ ಚುನಾವಣೆ ಮೂಲಕ ಆಯ್ಕೆ ಮಾಡಲು ಪತ್ರವು ಕರೆ ನೀಡಿದೆ. ಹಿಂದೆ ಸಿಡಬ್ಲುಸಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿತ್ತು,ಆದರೆ ಸುದೀರ್ಘ ಕಾಲದಿಂದ ಇದನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿದವು.
2014ರಲ್ಲಿ ಪಕ್ಷದ ಸೋಲು ಮತ್ತು ನಂತರದ ನಿರಂತರ ಅವನತಿಯ ಬಗ್ಗೆ ಪ್ರಾಮಾಣಿಕ ಆತ್ಮಾವಲೋಕನ ನಡೆದಿಲ್ಲ ಎಂದು ಹೇಳಿರುವ ಹಿರಿಯ ನಾಯಕರು,ಪಕ್ಷದ ಪುನಃಶ್ಚೇತನಕ್ಕೆ ಮಾರ್ಗದರ್ಶನವನ್ನು ನೀಡಲು ಸಾಂಸ್ಥಿಕ ನಾಯಕತ್ವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದೂ ಸೂಚಿಸಿದ್ದಾರೆ.