ದಿಲ್ಲಿ ಹಿಂಸಾಚಾರದ ಕುರಿತ ಪುಸ್ತಕ ಹಿಂದಕ್ಕೆ: ಬ್ಲೂಮ್ಸ್‌ಬರಿ ಇಂಡಿಯಾವನ್ನು ಬಹಿಷ್ಕರಿಸಿದ ಲೇಖಕರು

Update: 2020-08-23 17:48 GMT

ಹೊಸದಿಲ್ಲಿ, ಆ. 23: ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಅತಿಥಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕಿಗಳು ವ್ಯಕ್ತವಾದ ಬಳಿಕ ದಿಲ್ಲಿ ಹಿಂಸಾಚಾರದ ಕುರಿತ ಪುಸ್ತಕವನ್ನು ಬ್ಲೂಮ್ಸ್‌ಬರಿ ಇಂಡಿಯಾ ಹಿಂದೆಗೆದುಕೊಂಡಿದೆ. ಇದರಿಂದ ಅಸಮಾಧಾನಗೊಂಡಿರುವ ಮೂವರು ಲೇಖಕರು ಬ್ಲೂಮ್ಸ್‌ಬರಿ ಇಂಡಿಯಾ ಪ್ರಕಟಿಸಬೇಕಿದ್ದ ತಮ್ಮ ಪುಸ್ತಕಗಳನ್ನು ಹಿಂದೆ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಮೋನಿಕಾ ಅರೋರಾ, ಸೋನಾಲಿ ಚಿಟಾಲ್ಕರ್ ಹಾಗೂ ಪ್ರೇರಣಾ ಮಲ್ಹೋತ್ರ ರಚಿಸಿದ ‘ದಿಲ್ಲಿ ರಯಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ’ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದದ ಮುನ್ನ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.

ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಪ್ರತಿಪಾದನೆಯನ್ನು ಬ್ಲೂಮ್ಸ್‌ಬರಿ ಇಂಡಿಯಾ ಶುಕ್ರವಾರ ನಿರಾಕರಿಸಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನಿತರಲ್ಲಿ ಚಿತ್ರ ನಿರ್ಮಾಣಕಾರ ವಿವೇಕ್ ಅಗ್ನಿಹೋತ್ರಿ ಹಾಗೂ ಒಪಿ ಇಂಡಿಯಾ ಸಂಪಾದಕ ನೂಪುರ್ ಶರ್ಮಾ ಕೂಡ ಸೇರಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಜಾಹೀರಾತು ಹೇಳಿತ್ತು. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಅನಂತರ ಬ್ಲೂಮ್ಸ್‌ಬರಿ ಇಂಡಿಯಾ, ತಾನು ಪುಸ್ತಕ ಪ್ರಕಟಿಸಿರುವುದಾಗಿ ತಿಳಿಸಿತ್ತು. ಆದರೆ, ಈ ಪುಸ್ತಕದ ಬಿಡುಗಡೆಯ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುತ್ತಿಲ್ಲ ಎಂದು ಹೇಳಿತ್ತು.

ಹಲವು ಪುಸ್ತಕಗಳನ್ನು ಪ್ರಕಟಿಸಿರುವ ಹಾಗೂ ಭಾರತದ ಪ್ರಾಥಮಿಕ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಪ್ರತಿಕ್ರಿಯಿಸಿ, “ನಾನು ಮತ್ತೊಮ್ಮೆ ಬ್ಲೂಮ್ಸ್‌ಬರಿ ಇಂಡಿಯಾದೊಂದಿಗೆ ಎಂದಿಗೂ ಕೆಲಸ ಮಾಡಲಾರೆ” ಎಂದಿದ್ದಾರೆ.

 ಒಂದು ಸಣ್ಣ ಒಳಸಂಚು ಭಾರತೀಯ ಪ್ರಕಾಶನವನ್ನು ನಿಯಂತ್ರಿಸುತ್ತದೆ ಹಾಗೂ ಸೈದ್ಧಾಂತಿಕ ಸೆನ್ಸಾರ್‌ಶಿಪ್ ಅನ್ನು ಹೇರುತ್ತಿರುವ ಬಗ್ಗೆ ನಾನು ಕೆಲವು ದಿನಗಳ ಹಿಂದೆ ಪ್ರಶ್ನಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಹೇಗೆ ಈ ತಂತ್ರವನ್ನು ಬಳಸಲಾಗಿದೆ ಎಂಬುದಕ್ಕೆ ಒಂದು ಉದಾಹರಣೆಗೆ ನಾವು ಸಾಕ್ಷಿಯಾಗಿದ್ದೇವೆ. ನಾನು ಈ ಪುಸ್ತಕವನ್ನು ಓದಿಲ್ಲ. ಅದು ಚೆನ್ನಾಗಿದೆಯೋ ಕೆಟ್ಟದಾಗಿದೆಯೋ ಎಂಬ ಬಗ್ಗೆ ತಿಳಿದಿಲ್ಲ. ಇದು ಗುಣಮಟ್ಟ ನಿಯಂತ್ರಣ ಅಲ್ಲ. ಬದಲಾಗಿ ಸೆನ್ಸಾರ್‌ಶಿಪ್. ನಾನು ಇನ್ನೆಂದಿಗೂ ಬ್ಲೂಮ್ಸ್‌ಬರಿ ಇಂಡಿಯಾದಲ್ಲಿ ಪುಸ್ತಕ ಪ್ರಕಟಿಸಲಾರೆ” ಎಂದು ಅವರು ಹೇಳಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲೇಖಕ ಸಂಜಯ್ ದೀಕ್ಷಿತ್, ಸೆನ್ಸಾರ್‌ಶಿಪ್ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. “ನಾನು ಬ್ಲೂಮ್ಸ್‌ಬರಿ ಇಂಡಿಯಾದೊಂದಿಗಿನ ಸಂಬಂಧವನ್ನು ಕೊನೆಗೊಳಿಸುತ್ತೇನೆ ಎಂದು ಘೋಷಿಸುತ್ತೇನೆ. ಅಲ್ಲದೆ, 2020 ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಲಿರುವ ನನ್ನ ‘ನಲ್ಲಿಫೈಯಿಂಗ್ ಆರ್ಟಿಕಲ್ 370 ಆ್ಯಂಡ್ ಎನೇಕ್ಟಿಂಗ್ ಸಿಎಎ’ ಪುಸ್ತಕವನ್ನು ಪ್ರಕಟನೆಯಿಂದ ಹಿಂದೆ ತೆಗೆಯುವಂತೆ ಪ್ರಕಾಶನ ಸಂಸ್ಥೆಗೆ ನೋಟಿಸು ಕಳುಹಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

 ಜೆಎನ್‌ಯು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಲೇಖಕ ಆನಂದ ರಂಗನಾಥನ್, ತನ್ನ ಮುಂದಿನ ಪುಸ್ತಕ ‘ಫಾರ್ಗಾಟನ್ ಹಿರೋಸ್ ಆಫ್ ಇಂಡಿಯನ್ ಸಯನ್ಸ್’ಗೆ ನೀಡಿದ ಮುಂಗಡವನ್ನು ಬೂಮ್ಸ್‌ಬರಿಗೆ ಹಿಂದಿರುಗಿಸುತ್ತೇನೆ. ‘‘ಒಂದು ಪುಸ್ತಕ ಅಂದರೆ ಒಂದು ಚಿಂತನೆ. ಒಬ್ಬರು ಅದನ್ನು ದೃಢವಾಗಿ ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆದರೆ, ಆ ಚಿಂತನೆಯನ್ನು ನಾಶ ಮಾಡಬಾರದು. ಬ್ಲೂಮ್ಸ್‌ಬರಿಯ ನಿರ್ಧಾರವನ್ನು ಎಲ್ಲ ಲೇಖಕರು ಹಾಗೂ ಓದುಗರು ಖಂಡಿಸಬೇಕು’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News